ನಗರದ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಪ್ರೊ.ಎನ್.ಕೆ.ಲೋಲಾಕ್ಷಿ ಅವರ ‘ದ್ಯಾವ್ರಗುಡ್ಡ’ ಕಾದಂಬರಿಯನು ಸಾಹಿತಿ, ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಬಿಡುಗಡೆಗೊಳಿಸಿದರು. ಪ್ರೊ.ಎಂ.ಶೋಭಾ, ಪ್ರೊ.ಕವಿತಾ ರೈ ಇದ್ದರು.
- ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ
- ಜನಪ್ರಿಯ ಕಲಾ ಮಾಧ್ಯಮದಲ್ಲಿ ಸಂವೇದನಶೀಲತೆ ಮರೀಚಿಕೆ
ಮೈಸೂರು: ಜನಪ್ರಿಯ ಕಲಾ ಮಾಧ್ಯಮದಲ್ಲಿ ಲಾಭಕೋರತನವೇ ಮುಖ್ಯವಾಗಿರುತ್ತದೆಯೇ ಹೊರತು, ಸಂವೇದನಶೀಲತೆಯಲ್ಲ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನದ ಸಹಯೋಗದಲ್ಲಿ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೊ.ಎನ್.ಕೆ.ಲೋಲಾಕ್ಷಿ ಅವರ ‘ದ್ಯಾವ್ರಗುಡ್ಡ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪ್ರಿಯ ಸಾಹಿತ್ಯ, ಕವಿತೆ, ಸಿನಿಮಾಗಳು ಅಭಿರುಚಿಹೀನ. ಅಗ್ಗದ ರೂಪಕ ಎಂಬ ಮಾತು ಇದೆ. ಜರ್ಮನಿಯ ಕವಿ ಬರ್ಟೋಲ್ಟ್ ಬ್ರೆಕ್ಟ್ ಹೇಳಿದಂತೆ ಜನಪ್ರಿಯ ಕಥೆ, ಸಾಹಿತ್ಯ ಜನರ ಬದುಕಿನಲ್ಲಿ ಸ್ವೀಕಾರಕರವಾಗಿರಬೇಕು. ಜನಪರ ಪರವಾಗಿ ನಿರೂಪಿಸುವ ನೆಲೆ-ನಿಲುವು ಹೊಂದಿರಬೇಕು. ಆಗಲೇ ಅದು ಜನರಿಗೆ ತಲುಪುತ್ತದೆ ಎಂದರು.
ಜನಪ್ರಿಯ ಮಾದರಿಯ ಕಲಾರೂಪದಲ್ಲಿ ಸಾಹಿತ್ಯ, ಸಿನಿಮಾ, ಕಥೆ, ಸುದ್ದಿ ಮಾಧ್ಯಮಗಳೂ ಬರುತ್ತವೆ. ಈ ಕಲಾಮಾಧ್ಯಮ ಬಂಡವಾಳಶಾಹಿ ವ್ಯವಸ್ಥೆಗೆ ಬದ್ಧವಾಗಿರುತ್ತದೆ. ಲಾಭ ಗಳಿಕೆಯೇ ಮುಖ್ಯ ಮಾನದಂಡವಾಗಿರುತ್ತದೆ. ಬಹಳಷ್ಟು ಸಿನಿ ನಿರ್ದೇಶಕರು ‘ಜನರು ಕೇಳುವಂತಹ ಸಿನಿಮಾ ಕೊಡುತ್ತಿದ್ದೇವೆ’ ಎಂಬ ವಾದಿಸುತ್ತಾರೆ. ಆದರೆ, ಯಾರಾದರೂ ಅರೆ ಬೆತ್ತಲೆ ಯುವತಿಯ ನೃತ್ಯವನ್ನು ತೋರಿಸಲು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.
ಪುಸ್ತಕೋದ್ಯಮ, ಪತ್ರಿಕೋದ್ಯಮ, ಸಿನಿಮೋದ್ಯಮವಾಗಿ ಪರಿವರ್ತನೆಗೊಂಡಾಗ ಲಾಭವೇ ಮುಖ್ಯ ಹೊರತು, ಸಂವೇದನೆಯಲ್ಲ. ಹೀಗಾದಾಗ, ಮಾನವೀಯ ಸೂಕ್ಷ್ಮತೆ ನಾಶವಾಗುತ್ತದೆ. ಆದರೆ, ಸಂಪಾದನೆ ಮತ್ತು ಸಂವೇದನೆಯಲ್ಲಿ ಸಮತೋಲನ ಕಾಯ್ದುಕೊಂಡರೆ ಅದು ಜನರಿಗೆ ತಲುಪುತ್ತದೆ ಎಂದೂ ವಿಶ್ಲೇಷಿಸಿದರು.
ನವ್ಯಕಾಲದಲ್ಲಿ ಜನಪ್ರಿಯ ಸಾಹಿತ್ಯವನ್ನು ನಿರ್ಲಕ್ಷೃ ಮಾಡಲಾಯಿತು. ಜನಪ್ರಿಯತೆ ಎಂಬುದು ಅರ್ಹತೆಯೂ ಅಲ್ಲ, ಶ್ರೇಷ್ಠತೆಯೂ ಅಲ್ಲ. ಬರಹಗಾರ ಸಾಹಿತ್ಯವನ್ನು ಬರೆಯದೇ ಇದ್ದರೆ ಅದು ಹೇಗೆ ತಾನೇ ಸೃಷ್ಟಿಯಾಗಲು ಸಾಧ್ಯ? ಶ್ರೇಷ್ಠವಾಗಲು ಸಾಧ್ಯ?
ಶ್ರೇಷ್ಠತೆ ಎಂಬುದು ಶೋಧ. ಶ್ರೇಷ್ಠತೆಯ ಹಠಕ್ಕೆ ಬಿದ್ದು ಅನೇಕರು ಬಹಳಷ್ಟು ಕೃತಿ ರಚಿಸಿದ್ದಾರೆ. ಅವುಗಳಲ್ಲಿ ಉತ್ತಮ ಕೃತಿ ಬಂದಿಲ್ಲ. ಕಡಿಮೆ ಬರೆದವರು ಉತ್ತಮ ಕೃತಿ ಕೊಟ್ಟಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಇಂತಹ ಸಿದ್ಧ ಮಾದರಿಯ ಧೋರಣೆಯೇ ಜನಪ್ರಿಯ ಸಾಹಿತ್ಯವನ್ನು ತಿರಸ್ಕರಿಸುವ ಮೂಲಕ ಸಾಹಿತ್ಯ ಕೊಂಡಿಯೊಂದು ಕಳಚಿದೆ ಎಂದು ಅಭಿಪ್ರಾಯಿಸಿದರು.
ಅನಕೃ, ಬೀಚಿ, ಬಸವರಾಜ ಕಟ್ಟಿಮನಿ, ತ್ರಿವೇಣಿಯಂತಹ ಸಾಹಿತಿಗಳ ಜನಪ್ರಿಯ ಸಾಹಿತ್ಯವನ್ನು ತಿರಸ್ಕರಿಸಿ, ಅವುಗಳ ಚರಿತ್ರೆಯನ್ನೇ ನಿರ್ಲಕ್ಷಿೃಸಲಾಯಿತು. ದಶಕಗಳ ಬಳಿಕ ಅವುಗಳು ‘ಓದಲು ಯೋಗ್ಯ’, ‘ಉತ್ತಮ ಕೃತಿ’ ಎಂದು ಹೇಳಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎಂದು ಲಘುವಾಗಿ ಪರಿಗಣಿಸಲಾಯಿತು. ಅಡುಗೆ ಮನೆಯಲ್ಲಿ ಅವುಗಳನ್ನು ಇಟ್ಟವರು ಯಾರು? ಪುರುಷ ಪ್ರಧಾನ ಆರ್ಥಿಕ ಸಂರಚನೆ ಸಮಾಜವು ಮಹಿಳೆಯರನ್ನು ನಿಯಂತ್ರಿಸಲು ಹೀಗೆ ಮಾಡಿತು ಎಂದೂ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಶೋಭಾ, ಕರಾಮುವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಪ್ರೊ.ಕವಿತಾ ರೈ ಅವರು ಕೃತಿಯ ಕುರಿತು ಮಾತನಾಡಿದರು. ಲೇಖಕಿ ಪ್ರೊ.ಎನ್.ಕೆ.ಲೋಲಾಕ್ಷಿ ಇದ್ದರು.