ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಮ್ಮೇಳನವನ್ನು ಶಿಲ್ಪಾನಾಗ್ ಉದ್ಘಾಟಿಸಿದರು. ಡಾ.ಪಿ.ದೀಪಾ, ಡಾ.ಎಸ್.ಮಂಥಿರ ಮೂರ್ತಿ, ಡಾ.ಎಸ್.ಮಹೀಬಾ ಹೇಲೆನ್, ಡಾ.ಎಸ್.ಗಾಂಧಿದಾಸ್, ಡಾ.ಪ್ರತೀಶ್ ಕುಮಾರ್, ಡಾ.ಮಹೇಶ್ವರಿ, ಡಾ.ಶಕ್ತಿವೇಲ್ ಇತರರು ಇದ್ದರು.
- ರೈತರಿಗೆ ಅನುಕೂಲವಾಗುವಂತಹ ಉಪ ಉತ್ಪನ್ನಗಳನ್ನು ತಯಾರಿಸುವ ಕುರಿತು ಮಾಹಿತಿ ನೀಡಬೇಕು
- ರೈತರಿಗೆ ಅನುಕೂಲಕ್ಕಾಗಿ ರಾಜ್ಯದಲ್ಲಿ ಸರ್ಕಾರ, ಐದು ರೇಷ್ಮೆ ಉದ್ಯಾನ ನಿರ್ಮಿಸಲು ಘೋಷಿಸಿದೆ
ಮೈಸೂರು:ರಾಜ್ಯ ರೈತರ ಜೀವನೋಪಾಯವಾಗಿರುವ ರೇಷ್ಮೆ ಬೆಳೆಯಲ್ಲಿ ಮೌಲ್ಯವರ್ಧಿತ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೆಚ್ಚಿನ ಲಾಭ ಕಾಣಲು ಸಾಧ್ಯ ಎಂದು ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಆಯುಕ್ತೆ ಶಿಲ್ಪಾನಾಗ್ ಸಲಹೆ ನೀಡಿದರು.
ನಗರದ ಮಾನಂದವಾಡಿ ರಸ್ತೆಯಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಸುಸ್ಥಿರ ರೇಷ್ಮೆ ಕೃಷಿಗಾಗಿ ಪರಿಸರ ಸ್ನೇಹಿ ಕೀಟಶಾಸ್ತ್ರ: ಆವಿಷ್ಕಾರ, ರಕ್ಷಣೆ ಮತ್ತು ಸಮೃದ್ಧಿ’ ಎಂಬ ವಿಷಯ ಕುರಿತ ಕೀಟಶಾಸ್ತ್ರ (ಎಂಟಮೊಲಾಜಿ) ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ರೇಷ್ಮೆ ಉತ್ಪಾದನೆಯ ಮುಖ್ಯವಾಗಿದ್ದು, ರೈತ ಸಮುದಾಯದ ಜೀವನೋಪಾಯವಾಗಿದೆ. ಆದರೆ ರಾಜ್ಯದಲ್ಲಿ ಕೇವಲ ರೇಷ್ಮೆ ಗೂಡನ್ನು ಮಾತ್ರ ರೈತರು ಉತ್ಪಾದಿಸುತ್ತಿದ್ದಾರೆ. ಅದರ ಜತೆಗೆ ತ್ಯಾಜ್ಯದಿಂದ ಕೋಳಿ ಮತ್ತು ಮೀನಿನ ಆಹಾರಕ್ಕಾಗಿ ಪ್ಯೂಪಾ ತ್ಯಾಜ್ಯ, ಪ್ಯೂಪಾ ಎಣ್ಣೆ, ಬಟ್ಟೆ ಉತ್ಪಾದನೆಯಲ್ಲಿ ನೂಲು ರೇಷ್ಮೆ ಮತ್ತು ಉಳಿದ ತ್ಯಾಜ್ಯದಿಂದ ಕಾಂಪೋಸ್ಟ್ ಸೇರಿದಂತೆ ಉಪ ಉತ್ಪನ್ನನ್ನು ತಯಾರಿಸಬಹುದು ಎಂದು ಹೇಳಿದರು.
ಸಂಶೋಧನಾ ಕೇಂದ್ರಗಳು ರೈತರಿಗೆ ಅನುಕೂಲವಾಗುವಂತಹ ಉಪ ಉತ್ಪನ್ನಗಳನ್ನು ತಯಾರಿಸುವ ಕುರಿತು ಮಾಹಿತಿ ನೀಡಬೇಕು. ರೈತರಿಗೆ ಅನುಕೂಲಕ್ಕಾಗಿ ರಾಜ್ಯದಲ್ಲಿ ಸರ್ಕಾರ, ಐದು ರೇಷ್ಮೆ ಉದ್ಯಾನ ನಿರ್ಮಿಸಲು ಘೋಷಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ 1.22 ಲಕ್ಷ ಹೆಕ್ಟೇರ್ ಪ್ರದೇಶದ ಹಿಪ್ಪುನೇರಳೆ ತೋಟವನ್ನು ಹೊಂದಿದೆ. ಆದರೆ ರೈತರ ಹಿಪ್ಪುನೇರಳೆ ತೋಟಗಳ ಕಡಿಮೆ ಪ್ರದೇಶದಲ್ಲಿ ಇರುವುದರಿಂದ ವಿದೇಶಗಳಲ್ಲಿ ಯಾಂತ್ರೋಪಕರಣಗಳನ್ನು ಬಳಸಲು ಕಷ್ಟವಾಗುತ್ತದೆ. ಆದ್ದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತಹ ನೂತನ ಅವಿಷ್ಕಾರಗಳತ್ತ ಗಮನ ನೀಡುವ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಐದು ರೇಷ್ಮೆ ಉದ್ಯಾನ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು, ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕಿ ಡಾ.ಪಿ.ದೀಪಾ ಮಾತನಾಡಿ, ಈ ಸಮ್ಮೇಳನವು ಜೈವಿಕ, ಸಸ್ಯಶಾಸ್ತ್ರ ಮತ್ತು ಪರಿಸರ ವಿಧಾನಗಳ ಮೂಲಕ ಕೀಟನಾಶಕಗಳನ್ನು ಕಡಿಮೆ ಮಾಡಲು ಮತ್ತು ಹಿಪ್ಪುನೇರಳೆ, ಏರಿ, ಮುಗಾ, ಟಾಸರ್ ರೇಷ್ಮೆ ಕೃಷಿ ಸುಸ್ಥಿರತೆ ಕಾಪಾಡುವುದು, ಹಸಿರು ಕೀಟ ನಿರ್ವಹಣೆ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅಳವಡಿಕೆಯ ಬಗ್ಗೆ ಸಮ್ಮೇಳನ ಗಮನ ಹರಿಸುತ್ತದೆ ಎಂದರು.
ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿ ತಾಂತ್ರಿಕ ನಿರ್ದೇಶಕ ಡಾ.ಎಸ್.ಮಂಥಿರ ಮೂರ್ತಿ ಮಾತನಾಡಿ, ಮಂಡಳಿಯು ಸಂಶೋಧನೆ, ಅಭಿವೃದ್ಧಿ ಮತ್ತು ವಿಸ್ತರಣೆ ಮೇಲೆ ಹಾಗೂ ನಾಲ್ಕು ವಿಧ ರೇಷ್ಮೆಗಳ ಮೇಲೆಯು ಕೆಲಸ ಮಾಡುವಂತೆ ಹೇಳುತ್ತಾದೆ. ದೇಶದ ಇತರೆ ಸಂಶೋಧನ ಸಂಸ್ಥೆಗಳೊಂದಿಗೆ ಸಹಯೋಗದ ಕಾರ್ಯ ನಿರ್ವಹಿಸಿ ಸಂಶೋಧನೆಯನ್ನು ಹೆಚ್ಚಸಲು ಪ್ರೋತ್ಸಹಿಸುತ್ತದೆ ಎಂದರು.
ರೇಷ್ಮೆ ಕೃಷಿಯಲ್ಲಿನ ಕೀಟ ಸಮಸ್ಯೆಗಳನ್ನು ಪರಿಹರಿಸಲು ಐಸಿಎಆರ್ ಮತ್ತು ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ಜತೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಸುರಕ್ಷತಾ ರಾಸಾಯನಿಕಗಳು ಮತ್ತು ಸೂಕ್ಷ್ಮ ಜೀವಿ ಆಧಾರಿತ ಜೈವಿಕ ಕೀಟನಾಶಕಗಳ ಅಭಿವೃದ್ಧಿ ಮತ್ತು ಗುರುತಿಸುವಿಕೆಯ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆ.ಜೆಸ್ಟಿನ್ ಕುಮಾರ್ ಸಂಪಾದಿಸಿರುವ ‘ರೇಷ್ಮೆ ಹುಳು ಊಜಿ ನೊಣದ ಗ್ರಂಥಸೂಚಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಹಿರಿಯ ವಿಜ್ಞಾನಿ ಡಾ.ಎಸ್.ಮಹೀಬಾ ಹೇಲೆನ್, ಅಧಿಕಾರಿಗಳಾದ ಡಾ.ಎಸ್.ಗಾಂಧಿದಾಸ್, ಡಾ.ಪ್ರತೀಶ್ ಕುಮಾರ್, ಡಾ. ಮಹೇಶ್ವರಿ, ಡಾ.ಶಕ್ತಿವೇಲ್, ಡಾ.ಪುನೀತಾವತಿ, ಡಾ.ಸಿ.ಎಂ.ಬಾಬು ಸೇರಿದಂತೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನಿಂದ ರೇಷ್ಮೆ ಇಲಾಖೆಯ ಅಧಿಕಾರಿಗಳು ಇದ್ದರು.