ಹುಣಸೂರು ತಾಲೂಕು ರತ್ನಪುರಿ ಸಾಧನಾಪುರ ಕಾಲೇಜಿನ ಪ್ರಾಧ್ಯಾಪಕ ಸುಧಾಕರ್ ಅವರಿಗೆ ನವದೆಹಲಿಯಲ್ಲಿ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮನಿಂದರ್ ಪಾಲ್ ಸಿಂಗ್, ಮಹಿಷಿಣಿ ಕೊಲೊನ್ನೆ ಇದ್ದರು.
- ನ್ಯಾಷನಲ್ ಲೀಡರ್‌ಶಿಪ್ ಯೂತ್ ಅವಾರ್ಡ್ ಲಭ್ಯ
ಹುಣಸೂರು: ತಾಲೂಕಿನ ರತ್ನಪುರಿ ವಿಎಸ್‌ಎಸ್ ಸಾಧನಪುರ ಕಾಲೇಜಿನ ಪ್ರಾಧ್ಯಾಪಕ ಸುಧಾಕರ್ ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ನ್ಯಾಷನಲ್ ಲೀಡರ್‌ಶಿಪ್ ಯೂತ್ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ಯುವಜನ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಪ್ರಾಜೆಕ್ಟ್ ಪಾಯಿಂಟ್ ಒಡಿಶಾ, ಗ್ಲೋಬಲ್ ಯೂತ್ ಪೀಸ್ ಸಮಿತಿ ಹಾಗೂ ವಿಶ್ವ ಯುವಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಲಂಕಾ ಹೈಕಮಿಷನರ್ ಮಹಿಷಿಣಿ ಕೊಲೊನ್ನೆ, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮನೀಂದರ್ ಪಾಲ್ ಸಿಂಗ್, ವಿಶ್ವ ಯುವಕ ಕೇಂದ್ರದ ಸಿಇಒ ಉದಯ್ ಶಂಕರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಇದ್ದರು.
ಯುವ ನಾಯಕತ್ವ, ಪರಿಸರ ಸಂರಕ್ಷಣೆ ಹಾಗೂ ಎನ್‌ಎಸ್‌ಎಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಕೊಡುಗೆಗಳನ್ನು ಪರಿಗಣಿಸಿ ಸುಧಾಕರ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಕಾಲೇಜಿನ ಎನ್‌ಎಸ್‌ಎಸ್ ಘಟಕದಲ್ಲಿನ ಇವರು ಸಲ್ಲಿಸಿದ ವಿಶಿಷ್ಟ ಸೇವೆ ಪರಿಗಣಿಸಿ, 2024-25ನೇ ಸಾಲಿನ ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿಗೆ ಕಾಲೇಜು ಪಾತ್ರವಾಗಿತ್ತು. ಪ್ರಾಂಶುಪಾಲ ಶಿವಕುಮಾರ್, ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.