ಸಂಗೀತ ವಿವಿ ನೂತನ ಕುಲಪತಿ ಪ್ರೊ.ರಾಮಕೃಷ್ಣಯ್ಯ ಅವರಿಗೆ ನಿರ್ಗಮಿತ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು
- ಇವರು ಸಂಗೀತ ವಿವಿಯ 4ನೇ ವಿಸಿ
- ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ನಿರ್ದೇಶಕರಾಗಿ ಕರ್ತವ್ಯ
ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ರಾಮಕೃಷ್ಣಯ್ಯ ಸೋಮವಾರ ಅಧಿಕಾರ ಸ್ವೀಕರಿಸಿದರು.
ಇವರು ಸಂಗೀತ ವಿವಿಯ 4ನೇ ವಿಸಿ ಆಗಿದ್ದಾರೆ. ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ವಿವಿ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಇವರನ್ನು ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಗೀತ ವಿವಿಗೆ ಆಗಮಿಸಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಇವರಿಗೆ ನಿರ್ಗಮಿತ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಧಿಕಾರ ಹಸ್ತಾಂತರಿಸಿದರು.
2009ರಲ್ಲಿ ಪ್ರಾರಂಭವಾದ ಸಂಗೀತ ವಿವಿ ಪ್ರಥಮ ಕುಲಪತಿಯಾಗಿ ಡಾ.ಹನುಮಣ್ಣ ನಾಯಕ ದೊರೆ, 2ನೇ ವಿಸಿಯಾಗಿ ಡಾ.ಸರ್ವಮಂಗಳಾ ಶಂಕರ್ ಕಾರ್ಯನಿರ್ವಹಿಸಿದ್ದರು.
ನಂತರ 2019ರ ಜನವರಿ 6ರಿಂದ ಆಡಳಿತಾತ್ಮಕ ಕುಲಸಚಿವರಾಗಿದ್ದ ಪ್ರೊ.ನಾಗೇಶ್ ಬೆಟ್ಟಕೋಟೆ ಅವರನ್ನು 2021ರ ಜ.22ರಿಂದ ಪೂರ್ಣಾವಧಿ ಕುಲಪತಿ ನೇಮಕ ಮಾಡಲಾಗಿತ್ತು.