ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಶಿಕ್ಷಕರ ದಿನ ಹಾಗೂ ಸದ್ವಿದ್ಯಾ ರತ್ನ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಪ್ರೊ.ಎಂ.ಎಸ್.ಕೆ. ನರಹರಿಬಾಬು ಅವರಿಗೆ ಗೌರವಪೂರ್ವಕ ಗುರುವಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಗುರುವಿನ ಮಾರ್ಗದರ್ಶನವೇ ಬದುಕಿಗೆ ದಾರಿ. ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದರು.
ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮನೋಭಾವ, ಅಗತ್ಯ ಹಾಗೂ ಕಲಿಕಾ ವಿಧಾನಗಳನ್ನು ಅರಿತು ಬೋಧಿಸುವುದು ಶಿಕ್ಷಕರ ಪ್ರಮುಖ ಸವಾಲಾಗಿದೆ. ಶಿಕ್ಷಕರು ಮನೋಭಾವ, ಕೌಶಲ ಹಾಗೂ ಜ್ಞಾನ ಎಂಬ ಮೂರು ಅಂಶಗಳನ್ನು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇಂಟರ್‌ನೆಟ್, ಮೆಟಾ ಹಾಗೂ ಚಾಟ್‌ಜಿಪಿಟಿಯಂತಹ ಡಿಜಿಟಲ್ ಮೂಲಗಳಿಂದ ವಿದ್ಯಾರ್ಥಿಗಳಿಗೆ ಅಪಾರ ಮಾಹಿತಿ ಲಭ್ಯವಾಗುತ್ತಿದೆ. ಈ ಮಾಹಿತಿಯನ್ನು ಅರ್ಥಪೂರ್ಣ ಜ್ಞಾನವಾಗಿ ಪರಿವರ್ತಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಕನಿಷ್ಟ ಒಬ್ಬ ವಿದ್ಯಾರ್ಥಿಯ ಬದುಕನ್ನಾದರೂ ಪರಿವರ್ತಿಸಲು ಸಾಧ್ಯವಾದರೆ ಶಿಕ್ಷಕರಾಗಿ ಗುರಿ ಸಾಧಿಸಿದಂತೆಯೇ ಎಂದು ಅವರು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ, ಶಿಸ್ತು, ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಸದ್ವಿದ್ಯಾ ರತ್ನ ಪುರಸ್ಕಾರ ಹಾಗೂ ನಗದು ಬಹುಮಾನಗಳನ್ನು ನೀಡಲಾಗುವುದು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಎಸ್. ಬಾಲಾಜಿ ಅವರು ಶಿಕ್ಷಕರ ಸೇವೆ ಹಾಗೂ ವಿದ್ಯಾರ್ಥಿಗಳ ಸಾಧನೆಗಳು ಸಂಸ್ಥೆಯ ಶೈಕ್ಷಣಿಕ ಪರಂಪರೆಯ ಪ್ರಮುಖ ಭಾಗವಾಗಿವೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಂ.ಕವಿತಾ, ಎಸ್.ಮನೋಹರ್, ಬಿ.ವಿ.ಕೃಷ್ಣ, ಉಮಾಶಂಕರ ಹಾಗೂ ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಸಹಪಠ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸದ್ವಿದ್ಯಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಹ ಕಾರ್ಯದರ್ಶಿ ಕೆ.ಎನ್. ಫಣೀಶ್, ಆಡಳಿತ ಮಂಡಳಿ ಸದಸ್ಯರಾದ ರಘರಾಂ ವಾಜಪೇಯಿ, ಪ್ರಸನ್ನ ಕುಮಾರ್, ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಸ್.ಕವಿತಾ, ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ಪ್ರಾಂಶುಪಾಲ ವೈ.ಆರ್.ರಮೇಶ ಇತರರಿದ್ದರು.