ಸಂಗೀತ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕ.ವೆಂ.ರಾಜಗೋಪಾಲ ಅವರಿಗೆ ಸಂಬಂಧಿಸಿದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ, ಪ್ರೊ.ಕೆ.ರಾಮಕೃಷ್ಣಯ್ಯ, ಪ್ರೊ.ಎಂ.ಜಿ.ಮಂಜುನಾಥ, ಕೆ.ಆರ್.ನಂದಿನಿ, ಡಾ.ಮುರಳಿ ಕೂಡ್ಲೂರು ಇತರರಿದ್ದರು. 
ಮೈಸೂರು

ಪ್ರೊ.ಕ.ವೆಂ.ರಾಜಗೋಪಾಲ ಬಹುಮುಖಿ ಪ್ರತಿಭೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಬಣ್ಣನೆ
  • ಪ್ರೊ.ಕ.ವೆಂ.ರಾಜಗೋಪಾಲ ಶತಮಾನೋತ್ಸವ ಕಾರ್ಯಕ್ರಮ
ಮೈಸೂರು: ಪ್ರೊ.ಕ.ವೆಂ.ರಾಜಗೋಪಾಲ ಅವರು ಬಹುಮುಖಿ ಆಸಕ್ತಿದಾಯಕ ವ್ಯಕ್ತಿ. ಸಾಹಿತ್ಯ, ನಾಟಕ ಹೀಗೆ ವಿವಿಧ ಕ್ಷೇತ್ರದಲ್ಲೂ ಕೆಲಸ ಮಾಡಿ ಗಮನ ಸೆಳೆದಿದ್ದಾರೆ ಎಂದು ವಿದ್ವಾಂಸ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ  ಆಯೋಜಿಸಿದ್ದ ಪ್ರೊ.ಕ.ವೆಂ.ರಾಜಗೋಪಾಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರೊಬ್ಬ ಬರಹಗಾರ, ಕಥೆ, ಕವನ ಸೇರಿದಂತೆ ಹಲವು ಪ್ರಾಕಾರಗಳಲ್ಲಿ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಸಂಶೋಧನಾ ಕೆಲಸದಲ್ಲೂ ಸಕ್ರಿಯವಾಗಿದ್ದರು. ಸಭೆ-ಸಮಾರಂಭದಲ್ಲಿ ಭಾಗವಹಿಸುವುದು ಅವರಿಗೆ ಇಷ್ಟವಾಗಿತ್ತು. ಹಾಗೆ ಕುಳಿತು ಬರುತ್ತಿರಲಿಲ್ಲ. ಪ್ರಶ್ನೆ ಕೇಳುವ ಉತ್ಸಾಹಿ ಅವರು. ಒಂಟಿ ಸಲಗದಂತೆ ರಾಜ್ಯವಿಡೀ ಸಂಚಾರ ಮಾಡಿದವರು ಎಂದರು.
ತಿಳಿಯದ ವಿಷಯದ ಕುರಿತು ತಳಸ್ಪರ್ಶಿವಾಗಿ ಅಧ್ಯಯನ, ಸಂಶೋಧನೆ ಮಾಡುವುದರೊಂದಿಗೆ ಸದಾ ಜಾಗೃತರಾಗಿರುತ್ತಿದ್ದರು. ನವೋದಯ ಕಾಲದ ಅಪರೂಪ ಕೃತಿಗಳನ್ನೂ ಸಂಗ್ರಹಿಸಿದ್ದರು ಎಂದರು. 
‘ಕ.ವೆಂ’ ನನಗೆ ಬಾಲ್ಯಕಾಲದ ಮಿತ್ರ. 1950ರಲ್ಲಿ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿಗೆ ಸೇರಿಕೊಂಡರು. ನಾನೂ ಅದೇ ಕಾಲೇಜಿನಲ್ಲೇ ಓದುತ್ತಿದ್ದೆ. ಹಳ್ಳಕೇರಿ ಓಣಿಯಲ್ಲಿ ನಾವಿಬ್ಬರು ಸಂಬಂಧಿಕರ ಮನೆಯಲ್ಲಿದ್ದರಿಂದ ನಿತ್ಯ ಕಾಲೇಜಿಗೆ ಹೋಗಿಬರುತ್ತಿದ್ದವು. ಅವರ ಒಡನಾಡಿಗಳಾಗಿದ್ದ ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರು, ಪಿ.ಲಂಕೇಶ್ ಅವರೊಂದಿಗೆ ಸಾಹಿತ್ಯ ಚರ್ಚೆಯು ಅವರನ್ನು  ಪ್ರಗತಿಶೀಲರಾಗಿಸಿತು. ಅದು ಅವರ ಸಾಹಿತ್ಯ, ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಯಿತು ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ ಮಾತನಾಡಿ, ಪ್ರೊ.ಕ.ವೆಂ.ರಾಜಗೋಪಾಲ ಅವರದ್ದು ಬಹುಮುಖ ವ್ಯಕ್ತಿತ್ವ. ಕವಿ, ನಾಟಕಕಾರ, ಸಾಹಿತಿ, ಇತಿಹಾಸಕಾರ, ಅನುವಾದಕ, ನಟ, ನಿರ್ದೇಶಕ, ರಂಗಕರ್ಮಿ, ಅರಣ್ಯತಜ್ಞ ಹೀಗೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಸರ್ವ ಕುತೂಹಲಿಯಾಗಿದ್ದ ಅವರು ಸಂಶೋಧಕರೂ ಆಗಿದ್ದರು ಎಂದರು.
 ಪ್ರೊ. ಕ.ವೆಂ. ರಾಜಗೋಪಾಲ ಅವರಿಗೆ ಸಂಬಂಧಿಸಿದ ‘ರಂಗಾಂತರಂಗ’, ಸಾಹಿತ್ಯ ಸೌರಭ, ನಿಲುವು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕುಲಪತಿ ಪ್ರೊ.ಕೆ.ರಾಮಕೃಷ್ಣಯ್ಯ, ರಂಗಾಯಣ ಕಲಾವಿದೆ ಕೆ.ಆರ್.ನಂದಿನಿ, ಸಹ ಪ್ರಾಧ್ಯಾಪಕ ಡಾ.ಮುರಳಿ ಕೂಡ್ಲೂರು ಇನ್ನಿತರರಿದ್ದರು.