ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪ್ರೊ. ಕಾಳೇಗೌಡ ನಾಗವಾರ, ಪ್ರೊ.ಚ.ಸರ್ವಮಂಗಳಾ, ರಾಜಪ್ಪ ದಳವಾಯಿ, ಕೃಷ್ಣ ಜನಮನ ಇತರರು ಇದ್ದರು.
- ತಳ ಸಮುದಾಯ ಸೇರಿದಂತೆ ಸಮಾಜದಲ್ಲಿ ನೊಂದವರಿಗೆ ನೆರವಾಗುತ್ತಿದ್ದಲ್ಲದೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದಂತೆ ಪ್ರೋತ್ಸಾಹಿಸುತ್ತಿದ್ದರು
- ಮಾನವ ಮಂಟಪದ ಮೂಲಕ ಅಂತರ್ಜಾತಿ ವಿವಾಹಗಳನ್ನು ಮಾಡುವ ಮೂಲಕ ಅವರ ರಕ್ಷಣೆಗೆ ನಿಲ್ಲುತ್ತಿದ್ದರು
ಮೈಸೂರು:ದಿಕ್ಕು ದೆಸೆ ಇಲ್ಲದವರಿಗೆ ಜೀವನದಲ್ಲಿ ಭರವಸೆ ಮೂಡಿಸುವುದನ್ನು ಮೇಷ್ಟ್ರು ಪ್ರೊ.ಕೆ.ರಾಮದಾಸ್ ಕಲಿಸುತ್ತಿದ್ದರು ಎಂದು ಚಿಂತಕ ರಾಜಪ್ಪ ದಳವಾಯಿ ಹೇಳಿದರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನಿಂದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರವಾದಿ-ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಳ ಸಮುದಾಯ ಸೇರಿದಂತೆ ಸಮಾಜದಲ್ಲಿ ನೊಂದವರಿಗೆ ನೆರವಾಗುತ್ತಿದ್ದಲ್ಲದೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದಂತೆ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿದ್ದರು. ಮಾನವ ಮಂಟಪದ ಮೂಲಕ ಅಂತರ್ಜಾತಿ ವಿವಾಹಗಳನ್ನು ಮಾಡುವ ಮೂಲಕ ಅವರ ರಕ್ಷಣೆಗೆ ನಿಲ್ಲುತ್ತಿದ್ದರು ಎಂದರು.
ಸಮಾಜದಲ್ಲಿ ಯಾವುದೇ ಅನ್ಯಾಯ ಸಹಿಸದ ಪ್ರೊ.ಕೆ.ರಾಮದಾಸ್ ಅವರು, ಮೈಮೇಲೆ ಬರುವ ಸಮಸ್ಯೆಗಳನ್ನು ಲೆಕ್ಕಿಸದೆ ಯಾವುದೇ ಅಧಿಕಾರಿ, ರಾಜಕಾರಣಿಗಳನ್ನಾದರೂ ಎದುರು ಹಾಕಿಕೊಳ್ಳುತ್ತಿದ್ದರು ಎಂದರು.
ತಮ್ಮ ಕಾರ್ಯಗಳಿಂದಲೇ ನಮ್ಮ ನೆನಪಿನ ಆಳದಲ್ಲಿ ಯಾವಾಗಲೂ ಇರಬಹುದಾದ, ನೆನಪು ಮಾಡಿಕೊಳ್ಳಬಹುದಾದ ಗುರು, ಸ್ನೇಹಿತರಾಗಿದ್ದರು ಎಂದು ತಿಳಿಸಿದರು.
ಮೀಸಲಾತಿಯ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿರುವವರು ಜಾಸ್ತಿಯಾಗಿದ್ದಾರೆ. ಮೀಸಲಾತಿಯ ವಿಷಯವನ್ನು ಗ್ರಹಿಸುವವರು ಕಡಿಮೆ. ಸರಿಯಾಗಿ ಗ್ರಹಿಸಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ಚಿಂತಕಿ ಪ್ರೊ.ಚ.ಸರ್ವಮಂಗಳಾ ಮಾತನಾಡಿ, ದಾರಿ ಕಾಣದ ಯುವ ಜನರಿಗೆ ಸಂತೈಸುವ ಸಂತರು ಬೇಕಾಗಿದ್ದಾರೆ. ಅರೆ ಬೆತ್ತಲೆಯ ಗಾಂಧಿ ಶಾಂತ ಚಿತ್ತದ ಸಂತರಾಗಿದ್ದರೆ, ಸೂಟುಬೂಟಿನ ಡಾ.ಅಂಬೇಡ್ಕರ್ ಅಶಾಂತ ಚಿತ್ತ ವ್ಯಕ್ತಿಯಾಗಿದ್ದರೂ ಇಬ್ಬರ ಗುರಿಯೂ ಒಂದೇ ಆಗಿತ್ತು. ಇಬ್ಬರು ದೇಶದ ದಿಕ್ಕನ್ನು ಬದಲಿಸಿದರು ಎಂದು ಅಭಿಪ್ರಾಯಪಟ್ಟರು.
ಚಿಂತಕ ಪ್ರೊ. ಕಾಳೇಗೌಡ ನಾಗವಾರ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು.