ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ 58ನೇ ಸಂಸ್ಥಾಪನಾ ದಿನಾಚರಣೆ ಆಯೋಜಿಸಲಾಗಿತ್ತು. ಡಾ.ಕೆ.ಶ್ರೀನಿವಾಸರಾವ್, ಪ್ರೊ.ರಾಜೇಶ್ ಸಚ್ದೇವ್, ಪ್ರೊ. ಬಸವರಾಜ ಕೊಡಗುಂಟಿ, ಪ್ರೊ. ಉಮರಾಣಿ ಪಪ್ಪುಸ್ವಾಮಿ ಇತರರು ಇದ್ದರು. 
ಮೈಸೂರು

ಡಿಜಿಟಲ್ ಯುಗದಲ್ಲಿ ಭಾಷೆಗಳ ಉತ್ತೇಜನ ಅಗತ್ಯ:ಪ್ರೊ.ಜಿ.ಉಮಾ ಮಹೇಶ್ವರರಾವ್ ಅಭಿಪ್ರಾಯ

ಪ್ರಮುಖ ಮುಖ್ಯಾಂಶಗಳು

  • ಭಾಷಾ ಬೆಳವಣಿಗೆ, ಇತರೆ ಭಾಷೆಗಳೊಂದಿಗೆ ಸುಲಭವಾಗಿ ಅರ್ಥವಾಗುವಂತೆ ಸಂವಹನಗೊಳಿಸಲು ಸಹಕಾರಿಯಾಗುವಂತೆ ಎಐ ಅಭಿವೃದ್ಧಿಪಡಿಸುವ ಅಗತ್ಯ
  • ಎದುರಿಗಿರುವವರಿಗೆ ತಕ್ಷಣವೇ ಅವರದೇ ಭಾಷೆಯಲ್ಲಿ ಆ ಸಂದೇಶ ತಲುಪುವಂತಾದರೆ ಸಂವಹನ ಇನ್ನಷ್ಟು ಸುಲಭ
ಮೈಸೂರು:ಡಿಜಿಟಲ್ ಯುಗದಲ್ಲಿ ಭಾರತೀಯ ಭಾಷೆಗಳನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಆಧುನೀಕರಿಸುವ ಅಗತ್ಯವಿದೆ ಎಂದು ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪ್ರೊ.ಜಿ. ಉಮಾ ಮಹೇಶ್ವರ ರಾವ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿದ್ದ 58ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕೃತಕ ಬುದ್ಧಿಮತ್ತೆ ಎಲ್ಲ ರಂಗದಲ್ಲಿಯೂ ತನ್ನದೇ ಛಾಪು ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಭಾಷಾ ಬೆಳವಣಿಗೆ, ಇತರೆ ಭಾಷೆಗಳೊಂದಿಗೆ ಸುಲಭವಾಗಿ ಅರ್ಥವಾಗುವಂತೆ ಸಂವಹನಗೊಳಿಸಲು ಸಹಕಾರಿಯಾಗುವಂತೆ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು.
ಜನರು ತಮ್ಮ ಮಾತೃಭಾಷೆಯಲ್ಲೇ ಮಾತನಾಡಿದಾಗ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಮೂಲಕ ಎದುರಿಗಿರುವವರಿಗೆ ತಕ್ಷಣವೇ ಅವರದೇ ಭಾಷೆಯಲ್ಲಿ ಆ ಸಂದೇಶ ತಲುಪುವಂತಾಗಬೇಕು. ಆಗ ಸಂವಹನ ಇನ್ನಷ್ಟು ಸುಲಭವಾಗುತ್ತದೆ ಎಂದರು.
ಭವಿಷ್ಯದ ಭಾರತೀಯ ಭಾಷಾ ಸಂಶೋಧನೆಯು ಕೇವಲ ಮುದ್ರಿತ ದಾಖಲೀಕರಣಕ್ಕೆ ಸೀಮಿತವಾಗದೆ, ಭಾಷಾ ಜ್ಞಾನವನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ, ಬಹುಭಾಷಾ ಶಿಕ್ಷಣ, ಭಾಷಾ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಭಾರತೀಯ ಭಾಷೆಗಳನ್ನು ಜಾಗತಿಕವಾಗಿ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಡಾ.ಕೆ.ಶ್ರೀನಿವಾಸರಾವ್ ಮಾತನಾಡಿ, ಭಾರತದ ಭಾಷಾ ವೈವಿಧ್ಯತೆಯೇ ದೇಶದ ಸಾಂಸ್ಕೃತಿಕ ಏಕತೆಯ ಬುನಾದಿ. ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಉತ್ತಮವಾಗಿದೆ ಎಂದರು.
ವಿದೇಶಿ ಭಾಷೆಗಳ ಅತಿಯಾದ ವ್ಯಾಮೋಹದಿಂದ ನಮ್ಮ ಭಾಷಾ ಪರಂಪರೆ ದುರ್ಬಲಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ತಂತ್ರಜ್ಞಾನವು ಭಾಷಾ ಸಂಪ್ರದಾಯಗಳನ್ನು ಬದಲಿಸುವ ಬದಲು ಅವುಗಳನ್ನು ಬಲಪಡಿಸಲು ಬಳಕೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಸಿಐಐಎಲ್‌ನ ಮಾಜಿ ನಿರ್ದೇಶಕ ಪ್ರೊ. ರಾಜೇಶ್ ಸಚ್ದೇವ್ ಮಾತನಾಡಿ, ಮಾತೃಭಾಷೆಯಲ್ಲಿ ದೃಢವಾದ ಬೇರುಗಳನ್ನು ಹೊಂದಿರುವ ಸಾಮರಸ್ಯದ ಬಹುಭಾಷಾ ಭಾರತವನ್ನು ನಿರ್ಮಿಸುವ ಸಂಸ್ಥೆಯ ಉದ್ದೇಶ ಹಾಗೂ ಶಾಲಾ ಶಿಕ್ಷಣಕ್ಕಾಗಿ ತರಬೇತಿ ಪಡೆದ ಭಾಷಾ ವೃತ್ತಿಪರರನ್ನು ಸಿದ್ಧಪಡಿಸಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಿಐಐಎಲ್ ನಿರ್ದೇಶಕ ಪ್ರೊ. ಬಸವರಾಜ ಕೊಡಗುಂಟಿ ಮಾತನಾಡಿ, ಭಾಷೆಯು ಭಾರತದ ಐತಿಹಾಸಿಕ ಜ್ಞಾನ, ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಬುದ್ಧಿವಂತಿಕೆಯ ಭಂಡಾರವಾಗಿದೆ. ಪ್ರತಿಯೊಬ್ಬ ನಾಗರಿಕನೂ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ತನ್ನದೇ ಮಾತೃಭಾಷೆಯಲ್ಲಿ ಸಂವಹನ ನಡೆಸಲು ಅನುಕೂಲವಾಗುವಂತೆ ಒಳಗೊಳ್ಳುವ ಬಹುಭಾಷಾ ಭಾಷಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
ಉಪ ನಿರ್ದೇಶಕಿ ಹಾಗೂ ಸಂಯೋಜಕಿ ಪ್ರೊ. ಉಮರಾಣಿ ಪಪ್ಪುಸ್ವಾಮಿ ಮಾತನಾಡಿದರು. ಸಂಸ್ಥಾಪಕ ನಿರ್ದೇಶಕ ಪ್ರೊ. ದೇಬಿ ಪ್ರಸನ್ನ ಪಟ್ನಾಯಕ್ ಅವರು ಆನ್ ಲೈನ್ ಮೂಲಕ ವಿಶೇಷ ಸಂದೇಶ ನೀಡಿದರು.
ವಿದ್ವಾಂಸ ಪ್ರೊ.ಪಿ.ಆರ್. ಧರ್ಮೇಶ್ ಫೆರ್ನಾಂಡಿಸ್ ಇದ್ದರು.