Prof K..S.Bhagavan 
ಮೈಸೂರು

ಪ್ರೊ.ಭಗವಾನ್ ಹೇಳಿಕೆಯಿಂದ ವಾಲ್ಮೀಕಿ ಸಮುದಾಯದ ಭಾವನೆಗೆ ಧಕ್ಕೆ

ಮುಖಂಡ ತಾಯೂರು ಪ್ರಕಾಶ್ ಆರೋಪ

ತಿ.ನರಸೀಪುರ: ಮಹರ್ಷಿ ವಾಲ್ಮೀಕಿ, ಅವರ ಶ್ರೇಷ್ಠ ಕೃತಿ ರಾಮಾಯಣ ಹಾಗೂ ವಾಲ್ಮೀಕಿ ಸಮುದಾಯದ ಕುರಿತು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ತೀವ್ರವಾಗಿ ಖಂಡಿಸಿದ್ದಾರೆ.
ಪ್ರೊ.ಕೆ.ಎಸ್.ಭಗವಾನ್ ಅವರು ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣದ ಕುರಿತು ಹಗುರ ಮತ್ತು ಅವಮಾನಕಾರಿ ಭಾಷೆಯಲ್ಲಿ ಮಾತನಾಡಿರುವುದು ಖಂಡನೀಯ. ವಾಲ್ಮೀಕಿ ಸಮುದಾಯದ ಆರಾಧ್ಯ ದೈವವಾಗಿರುವ ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಸಾರ್ವಜನಿಕವಾಗಿ ತಾತ್ಸಾರ ಹಾಗೂ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿರುವುದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ರಾಮಾಯಣದಂತಹ ಮಹಾನ್ ಕೃತಿಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಗಳು ಕೀಳುಮಟ್ಟದ ಭಾಷೆಯನ್ನು ಬಳಸಿರುವುದು ಅಕ್ಷಮ್ಯವಾಗಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಹಾಗೂ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆಗಳು, ಆರಾಧ್ಯ ದೈವಗಳು ಹಾಗೂ ಸಾಂಸ್ಕೃತಿಕ ಪರಂಪರೆಗಳ ಕುರಿತು ಮಾತನಾಡುವಾಗ ಸಂಯಮ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದು ತಾಯೂರು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ಸಮುದಾಯವನ್ನು ಅವಮಾನಿಸುವ ಹಾಗೂ ಸಮಾಜದ ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.