ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ಇರುವ ಪಿಎಂಶ್ರೀ ಶಾಲೆ. 
ಮೈಸೂರು

ಪಿಎಂಶ್ರೀ ಶಾಲೆಯಲ್ಲಿ ಸಮಸ್ಯೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ಮುದಲು ಆರಂಭ
  • ಸರ್ಕಾರದಿಂದ ಕೋಟ್ಯಾಂತರ ಅನುದಾನ
ಎಚ್.ಡಿ.ಕೋಟ: ಒಂದು ದೇಶದ ಶಿಕ್ಷಣ ಆ ದೇಶದ ಆರ್ಥಿಕ ಪ್ರಗತಿಯನ್ನು ನಿರ್ಧಾರ ಮಾಡುತ್ತದೆ. ಉಚಿತ ಶಿಕ್ಷಣ, ಸಮಗ್ರ ಶಿಕ್ಷಣ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿ ಅದರ ಅನುಷ್ಠಾನಕ್ಕೆ ಕೋಟ್ಯಾಂತರ ರೂ., ಅನುದಾನ ಮೀಸಲು ಇಟ್ಟು ಖರ್ಚು ಮಾಡುತ್ತಿದೆ. ಆದರೆ ‘ಸರ್ಕಾರಿ ಶಾಲೆಗಳಲ್ಲಿ’ ಪ್ರಗತಿ ಮಾತ್ರ ಶೂನ್ಯ. ಇನ್ನೂ ಕೂಡ ಶೇಕಡಾ ನೂರರಷ್ಟು ಶಿಕ್ಷಣದಲ್ಲಿ ಪ್ರಗತಿ ಕಾಣಲು ಸಾಧ್ಯ ಆಗಿಲ್ಲ ಎಂಬ ಕೂಗು ಇದೆ.
ಪ್ರಧಾನ ಮಂತ್ರಿ ಸ್ಕೂಲ್ ಫರ್ ರೈಜಿಂಗ್ ಇಂಡಿಯಾ ( ದೇಶದ ಉಜ್ವಲ ಭವಿಷ್ಯಕ್ಕಾಗಿ ಶಾಲೆಗಳ ಉನ್ನತಿ ಕರಣ) ಪಿಎಂ ಶ್ರೀ ಹೆಸರಿನಲ್ಲಿ ಸರ್ಕಾರಿ ಶಾಲೆಯನ್ನು ಮೂಲ ಸೌಕರ್ಯ ಜತೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಪರಿಕಲ್ಪನೆಯ ಕನಸಿನ ಯೋಜನೆ ಇದಾಗಿದೆ. ಆದರೆ ಶಿಕ್ಷಕರ ಮುತುವರ್ಜಿ ವಹಿಸದ ಕಾರಣ ಪಿಎಂಶ್ರೀ ಶಾಲೆಯ ಪರಿಕಲ್ಪನೆ ಕಳೆದುಕೊಳ್ಳುವ ದಿಕ್ಕಿನಲ್ಲಿ ಸಾಗಿದೆ.
ಇದಕ್ಕೆ ಸಾಕ್ಷಿಯಾಗಿ ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ಇರುವ ಪಿಎಂ ಶ್ರೀ ಶಾಲೆಯೇ ಸಾಕ್ಷಿ.
ತಾಲೂಕಿನಲ್ಲೇ ಪ್ರಥಮವಾಗಿ ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಮೊದಲ ಪಿಎಂ ಶ್ರೀಶಾಲೆ ಇದು. ಎಲ್ ಕೆಜಿ ಯಿಂದ ಎಂಟನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ದೊರಕಲು ಅವಕಾಶ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಸುಮಾರು 150 ಮಕ್ಕಳು ದಾಖಲಾತಿ ಆಗಿದ್ದಾರೆ. ಸರ್ಕಾರದಿಂದ ಆರು ಜನ ಶಿಕ್ಷಕರು ನಿಯೋಜನೆ ಗೊಂಡಿದ್ದಾರೆ. ಮಕ್ಕಳ ಸಂಖ್ಯೆಗೆ ಅಗತ್ಯ ಇರುವಷ್ಟು ಶಾಲಾ ಕೊಠಡಿ ಇದೆ. ಆದರೆ, ಪಿಎಂ ಶ್ರೀ ಶಾಲೆಯ ಪರಿಕಲ್ಪನೆ ಎಲ್ ಕೆಜಿಯಿಂದ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ, ಯೋಗ, ಕಂಪ್ಯೂಟರ್ ಕಲಿಕೆ, ಕರಾಟೆ, ಸಂಗೀತ ಮತ್ತು ನೃತ್ಯ, ಚಿತ್ರಕಲೆ, ಸ್ಪೋಕನ್ ಇಂಗ್ಲಿಷ್ ನೀಡುವುದು. ಆದರೆ, ಇದರ ಯಾವುದರ ಗಂಧ ಗಾಳಿ ಇಲ್ಲಿನ ಮಕ್ಕಳಲ್ಲಿ ಕಾಣಲು ಸಾಧ್ಯ ಇಲ್ಲ. ಬೇರೆ ಸರ್ಕಾರಿ ಶಾಲೆಯಂತೆ ಇದು ಇರುವುದರಿಂದ ಶಿಕ್ಷಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಳೆದ ವರ್ಷ ಕರಾಟೆ, ಕಂಪ್ಯೂಟರ್, ಯೋಗ, ಸ್ಪೋಕನ್ ಇಂಗ್ಲಿಷ್ ಶಿಕ್ಷಕರು ಇದ್ದರು. ಆದರೆ ಚಿತ್ರಕಲೆ, ಸಂಗೀತ, ನೃತ್ಯ ಸೇರಿದಂತೆ ಇನ್ನಿತರ ಶಿಕ್ಷಕರನ್ನು ನೇಮಿಸಿಕೊಂಡಿಲ್ಲಾ ಎಂಬ ಮಾಹಿತಿ ಇದೆ. ಈ ವರ್ಷ ಆಗಾಗದಂತೆ ಕ್ರಮ ವಹಿಸುವುದು ಸೂಕ್ತ.
ಈ ಶಾಲೆಗೆ ಮೂಲ ಸೌಕರ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಕ್ಷಾಂತರ ರೂ., ಅನುದಾನ ಬಿಡುಗಡೆ ಆಗಿದೆ. ವಿಜ್ಞ್ಞಾನ ವಿಷಯಕ್ಕೆ ಸಂಬಂಧಿಸಿದ ಲ್ಯಾಬ್ ವಸ್ತುಗಳನ್ನು ಖರೀದಿಸಲಾಗಿದೆ. ಆದರೆ, ಲ್ಯಾಬ್ ಮಾಡದೇ ಇರುವ ಕಾರಣ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಉಪಯೋಗಿಸದೆ ಹಾಗೇ ಉಳಿದಿವೆ.
ಶೌಚಗೃಹದ ನಿರ್ವಹಣೆ ಕೊರತೆ: 150ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಈ ಶಾಲೆಯಲ್ಲಿ ಶಾಲೆಯಲ್ಲಿ ಕೇವಲ ಒಂದೇ ಶೌಚಗೃಹ ಇದೆ. ಇದನ್ನು ಗಂಡು ಮತ್ತು ಹೆಣ್ಣು ಮಕ್ಕಳು ಉಪಯೋಗಿಸಬೇಕಾಗಿದೆ. ಇರುವ, ಶೌಚಗೃಹವನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡದೆ ಇರುವ ಕಾರಣದಿಂದ ಗಬ್ಬು ನಾರುತ್ತಿದೆ. ಪ್ರತಿ ವರ್ಷ ಶೌಚಗೃಹ ನಿರ್ವಹಣೆ ಮತ್ತು ಶುಚಿ ಮಾಡಲು ಸರ್ಕಾರದಿಂದ ಪ್ರತ್ಯೇಕ ಅನುದಾನ ಬಂದರು ಕೂಡ ಸದ್ಬಳಕೆ ಮಾಡಿಕೊಳ್ಳುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಅವ್ಯವಸ್ಥೆ ಇದ್ದರು ಕೂಡ ಅದನ್ನು ಸರಿಪಡಿಸುವ ದಿಕ್ಕಿನಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮನಸ್ಸು ಮಾಡಿಲ್ಲದಿರುವುದು ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ ಯಾಗಿದೆ.
ನೀರಿನ ಸೌಲಭ್ಯ ವಿಲ್ಲ: ಶುದ್ಧ ಕುಡಿಯುವ ನೀರಿನ ಸೌಲಭ್ಯ ಶಾಲೆಯಲ್ಲಿ ಇಲ್ಲದೆ ಇರುವ ಕಾರಣಕ್ಕೆ, ಗ್ರಾಮದಲ್ಲಿ ಇರುವ ನೀರಿನ ಘಟಕದಿಂದ ನೀರನ್ನು ತಂದು ಮಕ್ಕಳು ಕುಡಿಯಲು ಉಪಯೋಗಿಸಬೇಕಾಗಿದೆ. ಬಿಸಿಯೂಟಕ್ಕೂ ಕೂಡ ನೀರನ್ನು ಹೊರಗಡೆಯಿಂದ ತಂದು ಅಡಿಗೆ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.
ಪಿಎಂ ಶ್ರೀ ಶಾಲೆಯಲ್ಲಿ ಸಿರಿ ಧಾನ್ಯಗಳ ಆಹಾರ ಕೊಡಲು ಅವಕಾಶ ಇದೆ ಆದರೆ ಬಿಸ್ಕತ್ತು ಮಾತ್ರ ನೀಡುತ್ತಾರೆ. ಮಕ್ಕಳಿಗೆ ರುಚಿ ಶುಚಿ ಯಾದ ಬಿಸಿಯೂಟ ಅಂತು ಸರಿಯಾದ ಪ್ರಮಾಣದಲ್ಲಿ ಇಲ್ಲವೇ ಇಲ್ಲ. ಮಕ್ಕಳು ಆಟ ಆಡಲು ಆಟದ ಮೈದಾನ ಇಲ್ಲಾ. ಆದರೆ ಅನುದಾನ ಮಾತ್ರ ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಿರುವ ಪಟ್ಟಿ ಇದೆ. ಆದರೆ ಪ್ರಗತಿ ಶೂನ್ಯ. ಶಾಲೆಯನ್ನು ನಿರ್ವಾಹಣೆ ಮಾಡುವಲ್ಲಿ ಮುಖ್ಯ ಶಿಕ್ಷಕರು ವಿಫಲವಾಗಿರುವುದು ಶಾಲೆಯ ಸ್ಥಿತಿ ನೋಡಿದಾಗ ತಿಳಿದು ಬರುತ್ತದೆ.
ಶಿಕ್ಷಕರಿಲ್ಲದಿದ್ದರು ವೇತನ ನೀಡಲಾಗಿದೆ: ಕಳೆದ ಎರಡು ವರ್ಷಗಳಿಂದ ಕೆಲವು ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಇದ್ದರು ಕೂಡ ವೇತನ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ ಬಸ್ ಸಂಪರ್ಕ ಇಲ್ಲದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ, ಸರ್ಕಾರದಿಂದ ಖಾಸಗಿ ವಾಹನದಲ್ಲಿ ಬರಲು ತಿಂಗಳಿಗೆ 600ರೂ., ನಂತೆ ಹತ್ತು ತಿಂಗಳು ಬೆಂಗಾವಲು ಭತ್ಯೆ ನೀಡಲು ಅವಕಾಶ ಇದೆ. ಆದರೆ ಶಿಕ್ಷಕರು ಪಾರದರ್ಶಕತೆ ಕಾಪಾಡಿಕೊಂಡಿಲ್ಲಾ ಎಂಭ ಆರೋಪ ಇದೆ.
ಈಗಾಗಲೇ ಶಾಲೆಗೆ ಒಂದು ನೂತನ ಕಟ್ಟಡ ನಿರ್ಮಾಣ ಆಗಿದೆ. ಗುಣಮಟ್ಟದ ಕಾಮಗಾರಿ ಆಗಿಲ್ಲ ಎಂಬುದಕ್ಕೆ ಈಗಾಗಲೇ ಕಿತ್ತು ಹೋಗಿರುವ ಟೈಲ್ಸ್ ಗಳು ಸಾಕ್ಷಿಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗಾಗಲೇ ಕ್ಲಸ್ಟರ್ ಮಟ್ಟದಲ್ಲಿ ದಾಖಲಾತಿ ಆಂದೋಲನ ಮಾಡಿದ್ದು, ಈ ರೀತಿಯ ಮೂಲ ಸೌಕರ್ಯಗಳು ಇಲ್ಲದ ಶಾಲೆಯನ್ನು ಪಟ್ಟಿ ಮಾಡಿ ಅವುಗಳಿಗೆ ಸೌಕರ್ಯ ಒದಗಿಸುವ ಜವಬ್ದಾರಿ ಅಧಿಕಾರಿಗಳ ಮೇಲಿರುತ್ತದೆ.
ಪಿಎಂಶ್ರೀ ಶಾಲೆಯ ಪರಿಸ್ಥಿತಿ ಈಗಿರುವಾಗ ಇನ್ನೂ ಬೇರೆ ಶಾಲೆಯ ಸ್ಥಿತಿ ಹೇಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಈಗಾದರೆ ಪಾಲಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಹೇಗೆತ್ತಾನೆ ಸೇರಿಸುತ್ತಾರೆ.
ಈಗಲಾದರು ಶಿಕ್ಷಣ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಪಿಎಂಶ್ರೀ ಶಾಲೆಗೆ ಭೇಟಿ ನೀಡಿ ಈ ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು. ಕೇಂದ್ರ ಮತ್ತು ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆ ಪಿಎಂಶ್ರೀ ಶಾಲಾ ಯೋಜನೆ ಸರಿಯಾಗಿ ಅನುಷ್ಠಾನಕ್ಕೆ ಬಂದು ಮಕ್ಕಳ ಶೈಕ್ಷಣಿಕ ಪ್ರಗತಿ ಉಜ್ವಲ ದಿಕ್ಕಿನಲ್ಲಿ ಸಾಗುವಂತೆ ಆಗಲಿ.