ಮಾಜಿ ಮೇಯರ್ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
- ತಾಂತ್ರಿಕ ಸಮಸ್ಯೆಗಳಿಂದಾಗಿ ರಾಜ್ಯಾದ್ಯಂತ ಎರಡು ತಿಂಗಳಿಂದಲೂ ಇ-ಖಾತೆ ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗಿದೆ
- ದೇಶದಲ್ಲಿಯೇ ಕರ್ನಾಟಕ ಐಟಿ, ಬಿಟಿ ಹಬ್ ಎನ್ನುವ ಹೆಸರು ಪಡೆದಿದ್ದರೂ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ವಿಫಲ
ಮೈಸೂರು:ಪ್ರತಿ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಐಟಿ ಮತ್ತು ಬಿಟಿ ಇಲಾಖೆಯ ಇ-ಖಾತೆ ಸಮಸ್ಯೆ ನಿವಾರಿಸಲು ವಿಫಲವಾಗಿದ್ದಾರೆ ಎಂದು ಮಾಜಿ ಮೇಯರ್ ಶಿವಕುಮಾರ್ ಟೀಕಿಸಿದರು.
ತಾಂತ್ರಿಕ ಸಮಸ್ಯೆಗಳಿಂದಾಗಿ ರಾಜ್ಯಾದ್ಯಂತ ಎರಡು ತಿಂಗಳಿಂದಲೂ ಇ-ಖಾತೆ ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದನ್ನು ನಿವಾರಿಸುವ ಬದಲು ಕೇವಲ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕರ್ನಾಟಕ ದೇಶದಲ್ಲಿಯೇ ಐಟಿ, ಬಿಟಿ ಹಬ್ ಎನ್ನುವ ಹೆಸರು ಪಡೆದಿದೆ. ಹೆಸರಾಂತ ಕಂಪನಿಗಳು ರಾಜ್ಯದಲ್ಲಿದ್ದು, ಅವುಗಳ ನೆರವು ಪಡೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಬಾಯಿ ಬಿಟ್ಟರೆ ದೇಶದ ಸಮಸ್ಯೆಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರದ್ದೇ ಖಾತೆ ವ್ಯಾಪ್ತಿಯ ಇ-ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಆಸ್ತಿಗಳನ್ನು ಮೊದಲೇ ಸರ್ವೆ ಮಾಡಿಸಿ ಅದನ್ನು ದಾಖಲೀಕರಣ ಮಾಡಿದ ಬಳಿಕ ಈ ಖಾತೆ ವ್ಯವಸ್ಥೆ ಜಾರಿಗೊಳಿಸಬೇಕಿತ್ತು. ಆದರೆ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ಏಕಕಾಲಕ್ಕೆ ರಾಜ್ಯಾದ್ಯಂತ ಇ-ಸ್ವತ್ತು ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಮುನ್ಸಿಪಲ್ ರೀಸರ್ಚ್ ಸೆಂಟರ್(ಎಅಆರ್‌ಸಿ) ಮೂಲಕ ಇ-ಸ್ವತ್ತು ಮಾಡಲಾಗುತ್ತಿತ್ತು. ಇದು ಕಾವೇರಿ ತಂತ್ರಾಂಶಕ್ಕೂ ಇಂಟಿಗ್ರೇಟೆಡ್ ಆಗಿದೆ. ಎಂಆರ್‌ಸಿಗೆ ತಾಂತ್ರಿಕ ಪರಿಣತಿ ಇಲ್ಲ, ಕಾವೇರಿ ತಂತ್ರಾಂಶವೂ ದೋಷಪೂರಿತವಾಗಿದ್ದು, ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದ ಎರಡು ತಿಂಗಳಿಂದ ಇ-ಖಾತೆ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ ಎಂದು ದೂರಿದರು.
ಇ-ಖಾತೆ ಮಾಡಿಸದೆ ಆಸ್ತಿ ಕೊಳ್ಳಲು ಹಾಗೂ ಮಾರಾಟ ಮಾಡಲು ಆಗದಂತಹ ಸ್ಥಿತಿ ಉಂಟಾಗಿದೆ. ಇದರಿಂದ ಅನಾರೋಗ್ಯ, ಮಕ್ಕಳ ಮದುವೆ ಅಥವಾ ಬೇರಾವುದೇ ತುರ್ತು ಸಂದರ್ಭಗಳಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ. ಮಾರಾಟ ಮಾಡುವುದಾಗಿ ಮುಂಗಡ ಪಡೆದವರು ನೋಂದಣಿಯಾಗದೆ ಗಲಾಟೆಗಳು ನಡೆದು ಪೊಲೀಸ್ ಠಾಣೆ ಮುಟ್ಟಿಲು ಏರಿವೆ. ಇದರ ಲಾಭ ಪಡೆಯುವ ಮಧ್ಯವರ್ತಿಗಳು, ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ನಕಲಿ ಇ-ಖಾತೆ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ಇ-ಖಾತೆ ಕಡ್ಡಾಯ ಆದೇಶವನ್ನು ಹಿಂಪಡೆಯಬೇಕು. ಒಂದು ವಾರದೊಳಗೆ ಸಮಸ್ಯೆಯನ್ನು ಸರಿಪಡಿಸದೇ ಇದ್ದರೆ ಸಾರ್ವಜನಿಕರ ಜತೆಗೂಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ, ರಂಗಸ್ವಾಮಿ ಇದ್ದರು.