‘ಯುವ ಸಂಭ್ರಮ’ ಕಾರ್ಯಕ್ರಮ  
ಮೈಸೂರು

ಯುವ ಸಂಭ್ರಮದಲ್ಲಿ ಮೂಲ ಸೌಲಭ್ಯಕ್ಕಿರಲಿ ಆದ್ಯತೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಂಶುಪಾಲರ ಸಭೆಯಲ್ಲಿ ಒಕ್ಕೊರಳ ಒತ್ತಾಯ
  • ಶುಚಿ-ರುಚಿಯಾದ ಊಟ, ಸ್ವಚ್ಛತೆ ಇರಲಿ
  • ಶೌಚಗೃಹಗಳಲ್ಲಿ ನೀರು ಒದಗಿಸಿ, ಪಾರ್ಕಿಂಗ್ ವ್ಯವಸ್ಥೆ ಒದಗಿ
ಮೈಸೂರು: ದಸರಾ ಮಹೋತ್ಸವಕ್ಕೂ ಮುನ್ನ ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ‘ಯುವ ಸಂಭ್ರಮ’ ಕಾರ್ಯಕ್ರಮ ಸೆ.28ರಿಂದ ಅಕ್ಟೋಬರ್ 5ರ ವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಶುಚಿ-ರುಚಿಯಾದ ಊಟ, ಸ್ವಚ್ಛತೆ ಇರಲಿ, ಶೌಚಗೃಹಗಳಲ್ಲಿ ನೀರು ಒದಗಿಸಿ, ಪಾರ್ಕಿಂಗ್ ವ್ಯವಸ್ಥೆ ಒದಗಿಸಬೇಕು ಎಂಬ ಆಗ್ರಹಗಳು ವ್ಯಕ್ತವಾದವು. 
ಯುವ ದಸರಾ ಉಪಸಮಿತಿ ವತಿಯಿಂದ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ  ಆಯೋಜಿಸಿದ್ದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಸಲಹೆ ಸ್ವೀಕರಿಸಲಾಯಿತು.
ವಿವಿಧ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಲವು ವಿಚಾರಗಳನ್ನು ಸಮಿತಿ ಗಮನಕ್ಕೆ ತಂದರು. ಯುವ ಸಂಭ್ರಮದಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ವಿಜೇತ ತಂಡಗಳಿಗೆ ಕೊಡುವ ಭತ್ಯೆಯನ್ನು ಹೆಚ್ಚಿಸಬೇಕು. ಕಾರ್ಯಕ್ರಮಗಳನ್ನು ಕಡಿಮೆ ಮಾಡುವ ಜತೆಗೆ, ಮತ್ತಷ್ಟು ದಿನ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು, ಸದಸ್ಯರು, ಮತ್ತಿತರರಿಗೆ ಗುಣಮಟ್ಟದ ಊಟ ನೀಡಬೇಕು. ಹಿಂದೆ ಕೆಲವರು ಕಳಪೆ ಊಟವನ್ನು ಬಿಸಾಡಿ ಹೋಗಿದ್ದಾರೆ. ಹೀಗಾಗಿ, ಶುಚಿ ಮತ್ತು ರುಚಿಯಾದ ಊಟ ಕೊಡಬೇಕು. ಜತೆಗೆ, ಶೌಚಗೃಹಗಳಲ್ಲಿ ಸಮರ್ಪಕವಾಗಿ ನೀರು ಒದಗಿಸಬೇಕು. ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.
 ಎನ್‌ಎಸ್‌ಎಸ್ ಹಾಗೂ ಇತರ ಅಧಿಕಾರಿಗಳು, ಸ್ವಯಂಸೇವಕರು ಶಿಸ್ತಾಗಿ ನಡೆದುಕೊಳ್ಳಬೇಕು. ವೇದಿಕೆ ಮುಂಭಾಗ ಹಾಗೂ ವೇದಿಕೆ ಮೇಲೆ ಅಶಿಸ್ತು ಇಲ್ಲದಂತೆ ಗಮನಿಸಬೇಕು. ಗೌರವಧನ ಹೆಚ್ಚಿಸಬೇಕು. ಕೊರಿಯೋಗ್ರಾಫರ್‌ಗಳಿಗೆ ಆದ್ಯತೆ ನೀಡಬೇಕು. ವಿಷಯ ಆಧಾರಿತದ ಮೇಲೆ ಪ್ರದರ್ಶನ ನೀಡಿದ ಅತ್ಯುತ್ತಮ ಕಾಲೇಜುಗಳನ್ನು ಆಯ್ಕೆ ಮಾಡಬೇಕು. ನೃತ್ಯತರಬೇತಿದಾರನ್ನು(ಕೊರಿಯೋಗ್ರಾಫರ್) ಬಳಸಿಕೊಳ್ಳಬೇಕು. ಕಾರ್ಯಕ್ರಮಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳೂ ವ್ಯಕ್ತವಾದವು.
ಇವೆಂಟ್‌ಗಳನ್ನು ಕಡಿಮೆ ಮಾಡಿ ಹೆಚ್ಚು ದಿನ ಅವಕಾಶ ನೀಡಿ. ಇದರಿಂದ ಗುಣಮಟ್ಟದ ಜತೆಗೆ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡಬೇಕು. ಒಂದೊಂದು ದಿನ ಜಾಸ್ತಿ ತಂಡಗಳನ್ನು ಆಯ್ಕೆ ಮಾಡಿದಷ್ಟು ಪುನರಾವರ್ತನೆಗೆ ದಾರಿಯಾಗಲಿದೆ ಎನ್ನುವ ಸಲಹೆಯನ್ನು ಸಮಿತಿ ಪರಿಗಣಿಸಿ ಕ್ರಮದ ಭರವಸೆ ನೀಡಿತು.
ಯುವ ಸಂಭ್ರಮ ಸಮಿತಿ ಉಪ ವಿಶೇಷಾಧಿಕಾರಿ ಆರ್.ಐಶ್ವರ್ಯ, ಮೈಸೂರು ವಿವಿ ಪ್ರಭಾರ ಕುಲಸಚಿವ ಪ್ರೊ.ಎಸ್.ಜೆ. ಮಂಜುನಾಥ್, ಪ್ರಾದೇಶಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ನಿರ್ದೇಶಕಿ ಎಸ್.ಪ್ರತಿಮಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸಿ.ನಾಗಮ್ಮ, ಪ್ರಾದೇಶಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಟಿ. ರಾಮಚಂದ್ರ, ಸಮಿತಿ ಕಾರ್ಯಾಧ್ಯಕ್ಷರಾದ ಪ್ರತಿಭಾ, ಸಹ ಕಾರ್ಯದರ್ಶಿಗಳಾದ ಪ್ರೊ.ಕೆ.ವೆಂಕಟೇಶ್, ಪ್ರೊ.ಎಂ.ಎಸ್. ಸಪ್ನಾ, ಪೂರ್ಣಶ್ರೀ, ಕಾರ್ಯದರ್ಶಿ ಮೈತ್ರಿ, ಸಮನ್ವಯಾಧಿಕಾರಿ ಆರ್.ನಿಂಗರಾಜು ಇನ್ನಿತರರಿದ್ದರು.