ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಆರ್.ಐಶ್ವರ್ಯ ಮಾತನಾಡಿದರು. ಚಿಕ್ಕ ಜವರಾಯ್ಯ, ಎಸ್.ಟಿ ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಸವಿತಾ, ವೀಣಾ, ಬಿ.ರಂಗೇಗೌಡ ಇದ್ದರು. 
ಮೈಸೂರು

ಜಾತಿ‌ ಪ್ರಮಾಣ ಪತ್ರ ವಿತರಣೆಗೆ ಆದ್ಯತೆ ನೀಡಿ: ಐಶ್ವರ್ಯ ಆರ್

ಶಾಲಾ, ಕಾಲೇಜು ದಾಖಲಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ದಾಖಲಾತಿಗೆ ತೊಂದರೆಯಾಗದಂತೆ ಪರಿಶಿಷ್ಟ ಜಾತಿ/ ಪಂಗಡ ಸೇರಿದಂತೆ ಇತರೆ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಆದ್ಯತೆ ನೀಡಿ ವಿತರಣೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕಿರುವ ದಾಖಲಾತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.
ಜಿಲ್ಲಾ ಜಾಗೃತ ಮತ್ತು ಉಸ್ತುವರಿ ಸಮಿತಿ ಸದಸ್ಯ ಚಿಕ್ಕ ಜವರಾಯ್ಯ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಗುವ ಕುಂದುಕೊರತೆ ಸಭೆಗಳಿಗೆ ಆಯಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪಂಗಡದ ಮುಂಖಡರನ್ನು ಆಹ್ವಾನಿಸಿದರೆ, ಬಹಳಷ್ಟು ತೊಂದರೆಗಳ ಬಗ್ಗೆ ಚರ್ಚಿಸಬಹುದು ಎಂದರು.
ತಾಲೂಕು ಮಟ್ಟದಲ್ಲಿ ನಿಗದಿತವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಡೆಯುತ್ತಿಲ್ಲ. ಸಮಿತಿ ರಚಿಸಿಕೊಂಡು ನಿಗದಿತವಾಗಿ ಸಭೆ ನಡೆಸುವಂತೆ ಮನವಿ ಮಾಡಿದರು.
ಮೈಸೂರು ನಗರ ಕೆಲವು ಬಡಾವಣೆ, ವೃತ್ತಗಳಿಗೆ, ದ್ವಾರಗಳಿಗೆ ಡಾ.ಬಿ.ಅರ್ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ವೃತ್ತ ಹಾಗೂ ದ್ವಾರಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ನಾಮಕರಣ ಮಾಡಲು ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಮೈಸೂರು ತಾಲೂಕು ಆಲನಹಳ್ಳಿ ಗ್ರಾಮದ ಸರ್ವೆನಂ. 28 ರಲ್ಲಿ ಜಮೀನು ಒತ್ತುವರಿಯಾಗಿರುವ ಬಗ್ಗೆ ಚರ್ಚಿಸಿದಾಗ ಅಪರ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿಯಾಗಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಮೈಸೂರು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಎಸ್.ಟಿ ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸವಿತಾ, ನಗರಪಾಲಿಕೆ ಉಪ ಆಯುಕ್ತೆ ವೀಣಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಇದ್ದರು.