ಉದ್ಘಾಟನೆ ಸಿದ್ಧವಾಗಿರುವ ವಿವೇಕ ಸ್ಮಾರಕ ಕಟ್ಟಡ
- ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ
- ಸ್ಥಳ ಪರಿಶೀಲಿಸಿದ ಮೈಸೂರು ನಗರ ಪೊಲೀಸ್ ಆಯುಕ್ತರು
ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿವೇಕ ಸ್ಮಾರಕ ಕಟ್ಟಡ ಉದ್ಘಾಟಿಸಲು ಆ.1ರಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಖಚಿತವಾಗಿದೆ.
ಮೈಸೂರು ಶ್ರೀ ರಾಮಕೃಷ್ಣ ಆಶ್ರಮದಿಂದ ಕೈಗೊಂಡಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ’ ಕಟ್ಟಡದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಆ.1ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರೊಳಗೆ ಈ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ.
ಈ ಕುರಿತು ರಾಮಕೃಷ್ಣ ಆಶ್ರಮದಿಂದ ಬಹಳ ದಿನಗಳ ಹಿಂದೆಯೇ ಪ್ರಧಾನಿ ಕಚೇರಿಗೆ ಆಹ್ವಾನ ನೀಡಲಾಗಿತ್ತು. ಇದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ. ಆ.1ರಂದು ನಗರಕ್ಕೆ ಆಗಮಿಸಿ, ವಿವೇಕ ಸ್ಮಾರಕ ಉದ್ಘಾಟಿಸುವ ಮಾಹಿತಿ ದೊರೆತಿದೆ. ಗುರುವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪಿಎಂ ಕಚೇರಿಯಿಂದ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಡಾ.ಹರ್ಷ ಪ್ರಿಯಂವದ, ಕೆ.ಎಸ್.ಸುಂದರ್‌ರಾಜ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಮಕೃಷ್ಣ ಆಶ್ರಮದ ಸ್ವಾಮೀಜಿ ಯುಕ್ತೇಶಾನಂದಜಿ ಅವರಿಂದ ಸ್ಮಾರಕದ ಕುರಿತು ವಿವರಣೆ ಪಡೆದುಕೊಂಡರು. ಸಭಾಂಗಣ ಸೇರಿದಂತೆ ಪ್ರಧಾನಿ ಮೋದಿ ಅವರು ಭೇಟಿ ನೀಡುವ ಕಟ್ಟಡದ ವಿವಿಧ ಭಾಗ ವೀಕ್ಷಿಸಿದರು.
ವಿವೇಕ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡಿರುವ ದಾನಿಗಳು ಪಾಲ್ಗೊಳ್ಳುವ ಸಭಾಂಗಣ ವೀಕ್ಷಿಸಲಾಯಿತು. ಈ ಕಟ್ಟಡಕ್ಕೆ ಒಂದೇ ಲಿಫ್ಟ್ ಇರುವುದರಿಂದ ಪ್ರಧಾನಮಂತ್ರಿಗಳ ಭದ್ರತಾ ಪಡೆ ಅನುಮತಿ ನೀಡುವ ಬಗ್ಗೆ ಪೊಲೀಸ್ ಅಧಿಕಾರಿಗಳ ಚರ್ಚಿಸಿದರು.
ಜತೆಗೆ, ಕಟ್ಟಡದಲ್ಲಿರುವ ಬೇರೆ ಸಭಾಂಗಣಕ್ಕೆ ಕಾರ್ಯಕ್ರಮ ಸ್ಥಳಾಂತರಿಸುವ ಕುರಿತು ಸಲಹೆ ನೀಡಿದರು. ಬಳಿಕ ಯಾದವಗಿರಿಯಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು.
ಇನ್ನೆರಡು ದಿನದಲ್ಲಿ ವಿಶೇಷ ಭದ್ರತಾ ಪಡೆಯ(ಎಸ್‌ಪಿಜಿ) ತಂಡ ನಗರಕ್ಕೆ ಆಗಮಿಸಿ, ಸ್ಥಳ ಪರಿಶೀಲಿಸಲಿದೆ. ಬಳಿಕ ಭದ್ರತೆ ಸಂಬಂಧ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿ, ಆ ನಂತರವಷ್ಟೇ ಸಭಾ ಕಾರ್ಯಕ್ರಮಕ್ಕೆ ಯಾವ ಸ್ಥಳ ಸೂಕ್ತ ಎಂದು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.