ಡಾ. ಹರ್ಷಿತಾ ಎನ್.ಜೆ.  
ಮೈಸೂರು

ಕ್ಯಾನ್ಸರ್ ಅರಿವು: ಭಯದಿಂದ ಆಶೆಯ ಕಡೆಗೆ

ಪ್ರಮುಖ ಮುಖ್ಯಾಂಶಗಳು

  • ತಡೆಗಟ್ಟುವಿಕೆ, ಮೊದಲ ಹಂತದ ಪತ್ತೆ ಮತ್ತು ಆಧುನಿಕ ಚಿಕಿತ್ಸೆಯೇ ಭರವಸೆಯ ದಾರಿ
ಮೈಸೂರು: ‘ಕ್ಯಾನ್ಸರ್’ ಎಂಬ ಪದ ಕೇಳುತ್ತಿದ್ದಂತೆಯೇ ಬಹುತೇಕ ಕುಟುಂಬಗಳಲ್ಲಿ ಭಯ, ಆತಂಕ ಮತ್ತು ಅನಿಶ್ಚಿತತೆ ಮೂಡುವುದು ಸಹಜ. ಆದರೆ ಇಂದಿನ ವೈದ್ಯಕೀಯ ವಾಸ್ತವ್ಯ ಹಿಂದಿನಂತಿಲ್ಲ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದ್ದು, ಕ್ಯಾನ್ಸರ್ ಎಂದರೆ ಎಲ್ಲ ಸಂದರ್ಭದಲ್ಲೂ ಪ್ರಾಣಾಪಾಯಕ್ಕೆ ಕಾರಣವಾಗುವ ರೋಗ ಎಂಬ ಕಲ್ಪನೆ ಬದಲಾಗುತ್ತಿದೆ.
ಸರಿಯಾದ ಅರಿವು, ಸಮಯೋಚಿತ ತಪಾಸಣೆ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಾಗೂ ಆಧುನಿಕ ಚಿಕಿತ್ಸೆಗೆ ಸೂಕ್ತ ಸಮಯದಲ್ಲಿ ಪ್ರವೇಶ ದೊರೆತರೆ ಅನೇಕ ಕ್ಯಾನ್ಸರ್‌ಗಳನ್ನು ತಡೆಗಟ್ಟಲು, ಆರಂಭಿಕ ಹಂತದಲ್ಲೇ ಗುರುತಿಸಲು ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಿದೆ.
ಲಕ್ಷಣ ಬರುವ ಮುನ್ನವೇ ಪತ್ತೆ ಸಾಧ್ಯ
ಕ್ಯಾನ್ಸರ್‌ನ ಮತ್ತೊಂದು ಸವಾಲೆಂದರೆ, ಹಲವು ವಿಧದ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದಿರುವುದು. ಹೀಗಾಗಿ ಆರೋಗ್ಯವಾಗಿದ್ದರೂ ಸೂಕ್ತ ವಯಸ್ಸಿನಲ್ಲಿ ಮತ್ತು ಅಪಾಯದ ಅಂಶಗಳನ್ನು ಆಧರಿಸಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.
ಗರ್ಭಕಂಠದ ಕ್ಯಾನ್ಸರ್‌ಗಾಗಿ ಪ್ಯಾಪ್ ಸ್ಮಿಯರ್ ಅಥವಾ HPV ಪರೀಕ್ಷೆ, ಸ್ತನ ಕ್ಯಾನ್ಸರ್‌ಗಾಗಿ ಮ್ಯಾಮೋಗ್ರಫಿ, ಕೋಲನ್ ಕ್ಯಾನ್ಸರ್‌ಗಾಗಿ ಮಲ ಪರೀಕ್ಷೆ ಅಥವಾ ಕೊಲೊನೋಸ್ಕೋಪಿ ಸೇರಿದಂತೆ ಕೆಲವು ತಪಾಸಣೆಗಳು ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ನೆರವಾಗುತ್ತವೆ. ಪುರುಷರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್‌ ಅಪಾಯವನ್ನು ಅಂದಾಜಿಸಲು PSA ಪರೀಕ್ಷೆ ಬಳಸಲಾಗುತ್ತದೆ. ದೀರ್ಘಕಾಲ ಧೂಮಪಾನ ಮಾಡಿರುವಂತಹ ಹೆಚ್ಚಿನ ಅಪಾಯದ ವ್ಯಕ್ತಿಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಕಡಿಮೆ ಪ್ರಮಾಣದ CT ಸ್ಕ್ಯಾನ್ ಮೂಲಕ ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಪತ್ತೆಗೆ ನೆರವಾಗಬಹುದು.
ಆದರೆ ಯಾವ ಪರೀಕ್ಷೆ ಯಾರಿಗೆ, ಯಾವ ವಯಸ್ಸಿನಲ್ಲಿ ಮತ್ತು ಎಷ್ಟು ಬಾರಿ ಅಗತ್ಯ ಎಂಬುದು ವ್ಯಕ್ತಿಯ ವಯಸ್ಸು, ಕುಟುಂಬದ ಹಿನ್ನೆಲೆ ಹಾಗೂ ಇತರ ಅಪಾಯದ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ವೈದ್ಯರ ಸಲಹೆ ಮುಖ್ಯ.

ತಡೆಗಟ್ಟುವಿಕೆಯೂ ಚಿಕಿತ್ಸೆಯಷ್ಟೇ ಮುಖ್ಯ

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ.
HPV ಲಸಿಕೆ ಹುಡುಗಿಯರು ಮತ್ತು ಹುಡುಗರಿಗೆ ಸೂಕ್ತ ವಯಸ್ಸಿನಲ್ಲಿ ನೀಡುವುದರಿಂದ HPV ಸೋಂಕಿಗೆ ಸಂಬಂಧಿಸಿದ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಹೆಪಟೈಟಿಸ್-B ಲಸಿಕೆ ದೀರ್ಘಕಾಲದ ಹೆಪಟೈಟಿಸ್-B ಸೋಂಕಿನಿಂದ ರಕ್ಷಿಸುವ ಮೂಲಕ ಲಿವರ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದರ ಜೊತೆಗೆ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದು, ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ದೇಹತೂಕ ಕಾಪಾಡಿಕೊಳ್ಳುವುದು ಮತ್ತು ಅತಿಯಾದ ಮದ್ಯಪಾನದಿಂದ ದೂರವಿರುವುದು ಕೂಡ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಚಿಕಿತ್ಸೆಯಲ್ಲೂ ಹೊಸ ಭರವಸೆ

ಕ್ಯಾನ್ಸರ್ ಚಿಕಿತ್ಸೆಯೂ ಇಂದು ಸಾಕಷ್ಟು ಬದಲಾಗಿದೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳ ಜೊತೆಗೆ ಟಾರ್ಗೆಟೆಡ್ ಥೆರಪಿ, ಇಮ್ಯುನೋಥೆರಪಿ ಹಾಗೂ ಪ್ರಿಸಿಷನ್ ಮೆಡಿಸಿನ್ ಮುಂತಾದ ಆಧುನಿಕ ಚಿಕಿತ್ಸಾ ವಿಧಾನಗಳು ಲಭ್ಯವಿವೆ.
ರೋಗಿಯ ಟ್ಯೂಮರ್‌ನ ಜೈವಿಕ ಮತ್ತು ಆನುವಂಶಿಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಂಡು ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವ ಮೂಲಕ ಕೆಲವು ಕ್ಯಾನ್ಸರ್‌ಗಳಲ್ಲಿ ರೋಗ ನಿಯಂತ್ರಣವನ್ನು ಉತ್ತಮಪಡಿಸಲು, ಬದುಕುಳಿಯುವ ಅವಧಿಯನ್ನು ಹೆಚ್ಚಿಸಲು ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗಿದೆ.

ಚಿಕಿತ್ಸೆಯ ಜೊತೆಗೆ ಆರ್ಥಿಕ ಸಿದ್ಧತೆಯೂ ಅಗತ್ಯ

ಆದರೆ ಆಧುನಿಕ ಕ್ಯಾನ್ಸರ್ ಚಿಕಿತ್ಸೆಯ ಮತ್ತೊಂದು ಪ್ರಮುಖ ಅಂಶವೆಂದರೆ ಅದರ ವೆಚ್ಚ. ಮುಂದುವರೆದ ಪರೀಕ್ಷೆಗಳು, ದೀರ್ಘಾವಧಿಯ ಚಿಕಿತ್ಸೆ ಹಾಗೂ ಕೆಲವು ಹೊಸ ಔಷಧಿಗಳ ವೆಚ್ಚ ಕುಟುಂಬಗಳ ಮೇಲೆ ಆರ್ಥಿಕ ಒತ್ತಡ ಉಂಟುಮಾಡಬಹುದು.
ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಅತ್ಯಂತ ಮಹತ್ವ ಪಡೆಯುತ್ತದೆ. ಸೂಕ್ತ ಆರೋಗ್ಯ ವಿಮೆ ಹೊಂದಿರುವುದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಎದುರಾದಾಗ ಚಿಕಿತ್ಸೆಯ ವೆಚ್ಚದ ಒತ್ತಡವನ್ನು ನಿರ್ವಹಿಸಲು ನೆರವಾಗಬಹುದು. ಹಣಕಾಸಿನ ಕಾರಣದಿಂದ ಅಗತ್ಯ ಚಿಕಿತ್ಸೆಯನ್ನು ವಿಳಂಬಗೊಳಿಸದಿರುವುದು ಕೂಡ ಅಷ್ಟೇ ಮುಖ್ಯ.
"

ಕ್ಯಾನ್ಸರ್ ಪತ್ತೆಯಾದ ದಿನವೇ ಜೀವನ ಅಂತ್ಯವಾಗುವುದಿಲ್ಲ. ಅದೇ ರೀತಿ ಕ್ಯಾನ್ಸರ್ ಎಂದರೆ ನಿರಾಶೆ ಮತ್ತು ಸೋಲು ಎಂಬುದೂ ಅನಿವಾರ್ಯವಲ್ಲ. ತಡೆಗಟ್ಟುವಿಕೆ, ನಿಯಮಿತ ತಪಾಸಣೆ, ಆರಂಭಿಕ ಪತ್ತೆ ಮತ್ತು ಸೂಕ್ತ ಆಧುನಿಕ ಚಿಕಿತ್ಸೆ—ಇವೇ ಕ್ಯಾನ್ಸರ್ ವಿರುದ್ಧದ ಹೋರಾಟದ ಪ್ರಮುಖ ಅಸ್ತ್ರಗಳು.ಇಂದು ನಾವು ಜಾಗೃತಿಯಿಂದ ತೆಗೆದುಕೊಳ್ಳುವ ಸಣ್ಣ ಆರೋಗ್ಯ ನಿರ್ಧಾರಗಳು ನಾಳೆ ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯಕರ, ಸುರಕ್ಷಿತ ಹಾಗೂ ನೆಮ್ಮದಿಯ ಬದುಕಿಗೆ ಬಲವಾದ ಅಡಿಪಾಯವಾಗಬಹುದು.