ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಸ್ತಪ್ರತಿಯ ಗ್ರಂಥವನ್ನು ಶೃಂಗೇರಿ ಮಠದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಕುತೂಹಲದಿಂದ ವೀಕ್ಷಿಸಿದರು.ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಎನ್.ನಾಗರಾಜು, ಕೆ.ಎಸ್.ರೇಖಾ, ಡಾ.ಡಿ.ಪಿ.ಮಧುಸೂದನಾಚಾರ್ಯ, ಡಾ.ಸಿ.ಪಾರ್ವತಿ ಇದ್ದರು.
- ಹಸ್ತಪ್ರತಿ, ತಾಳೆಗರಿ ರಕ್ಷಣೆಗೆ ಆದ್ಯತೆ ಕೊಡಿ
- ಶರೀರಕ್ಕೆ ಮಾಡಿಕೊಂಡ ಅಲಂಕಾರಕ್ಕಿಂತ ನಮ್ಮ ಒಳಭಾಗದ ಶರೀರಕ್ಕೆ ಹೆಚ್ಚು ಆದ್ಯತೆ ನೀಡಿ
- ಹಸ್ತಪ್ರತಿ, ತಾಳೆಗರಿಗಳ ಗ್ರಂಥಗಳನ್ನು ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿ
ಮೈಸೂರು: ಪುರಾತನ ಪ್ರಾಚ್ಯವಿದ್ಯೆ ಅಡಕವಾಗಿರುವ ಹಸ್ತಪ್ರತಿ, ತಾಳೆಗರಿಯಲ್ಲಿರುವ ಗ್ರಂಥಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಶೃಂಗೇರಿ ಮಠದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ, ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚ್ಯವಿದ್ಯೆ ಮಹಿಮೆ ವಿಶಿಷ್ಟವಾಗಿದೆ. ಸಂಸ್ಕೃತ, ಶಾಸ್ತ್ರಗ್ರಂಥಗಳು, ವೇದಾಂತ ಗ್ರಂಥಗಳೆಲ್ಲವೂ ಇದರಲ್ಲೇ ಇವೆ. ಇದರಲ್ಲಿ ಅಡಕವಾಗಿರುವ ಜ್ಞಾನ, ಉತ್ಕೃಷ್ಟ ವಿಚಾರಗಳು ಜೀವನ ಸಾರ್ಥಕಗೊಳಿಸುತ್ತವೆ. ಆದ್ದರಿಂದ ಹಸ್ತಪ್ರತಿ, ತಾಳೆಗರಿ ರಕ್ಷಣೆಗೆ ಆದ್ಯತೆ ಕೊಡಬೇಕಿದೆ. ಇದುವೇ ನಮ್ಮೆಲ್ಲ ಕರ್ತವ್ಯವಾಗಿದೆ ಎಂದರು.
ಹಿಂದೆ ಯಾವುದೇ ಆಧುನಿಕವಾದ ವ್ಯವಸ್ಥೆಗಳಿರಲಿಲ್ಲ. ಹಿಂದಿನವರು ಕಷ್ಟಪಟ್ಟು ತಾಳೆಗರಿಯಲ್ಲಿ ಅನೇಕ ವಿಚಾರವನ್ನು ಬರೆದಿದ್ದಾರೆ. ಇದು ಎಲ್ಲರಿಗೂ ಸಿಗಬೇಕೆಂಬ ಸದಾಶಯದಿಂದ ಹಸ್ತಪತ್ರಿ, ತಾಳೆಗರಿಗಳ ಮೇಲೆ ಬರೆದು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯವು ಅಪ್ರಕಟಿತ ಗ್ರಂಥಗಳನ್ನು ವಿಶೇಷ ಸಂಶೋಧನೆ ಮಾಡಿ ಪ್ರಕಟಗೊಳಿಸಿದೆ. ಮುಂದೆಯೂ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಉತ್ತಮವಾದ ಗ್ರಂಥಗಳು ಪ್ರಕಟಗೊಳ್ಳಲಿರುವುದು ಸಂತೋಷಕರವಾದ ವಿಷಯ.
ಇಂದು ಪುಸ್ತಕ ಮುಂಚೆಯೇ ಸಿಗುತ್ತದೆ. ಇದರಿಂದ ನಾಳೆ ಯಾವ ಪಾಠ ನಡೆಯುತ್ತದೆ ಎಂದು ಮುಂಚಿತವಾಗಿ ತಿಳಿಯುತ್ತದೆ. ಆದರೆ, ಹಿಂದೆ ಪುಸ್ತಕಗಳನ್ನು ಪ್ರಿಂಟ್ ಮಾಡುವ ವ್ಯವಸ್ಥೆ ಇರಲಿಲ್ಲ. ಗುರುಗಳು ಪಾಠ ಮಾಡುವಾಗ ಮಾತ್ರ ಹಾಗೂ ಅವರು ಹೇಳುವ ವಾಕ್ಯಗಳು ಮಾತ್ರ ಬರೆದುಕೊಳ್ಳಬೇಕಿತ್ತು ಎಂದು ತಿಳಿಸಿದರು.
ಈಗಿನ ಜನರು ಲೌಕಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ನೀಡುತ್ತಾರೆ. ಲೌಕಿಕ ವಿಚಾರಗಳನ್ನು ತಿಳಿದುಕೊಂಡರೆ ಸಾಕು ಎಂಬ ಭಾವನೆಯಲ್ಲಿರುತ್ತಾರೆ. ಶರೀರದ ಹೊರಭಾಗದಲ್ಲಿ ಚೆನ್ನಾಗಿ ಅಲಂಕಾರ ಮಾಡಿಕೊಂಡರೆ ಸಾಕು ಎಂದುಕೊಂಡಿದ್ದಾರೆ. ಶರೀರಕ್ಕೆ ಮಾಡಿಕೊಂಡ ಅಲಂಕಾರಕ್ಕಿಂತ ನಮ್ಮ ಒಳಭಾಗದ ಶರೀರಕ್ಕೆ ಹೆಚ್ಚು ಆದ್ಯತೆ ನೀಡಿ ಅದರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಶರೀರ ನಡೆಯುತ್ತಿರುವುದು ಹೊರಗಿನ ಅಲಂಕಾರದಿಂದಲ್ಲ. ನಮ್ಮ ಶರೀರದೊಳಗಿರುವ ಹೃದಯ ಸೇರಿದಂತೆ ಇನ್ನಿತರ ಅಂಗಗಳ ಆರೋಗ್ಯವಾಗಿದ್ದರೆ ಆಗ ಮಾತ್ರ ಶರೀರ ನಡೆಯುತ್ತದೆ. ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೀಗೆಯೇ ಪ್ರಾಚ್ಯವಿಜ್ಞಾನದ ಮಹಿಮೆಯನ್ನು ತಿಳಿದುಕೊಳ್ಳುವುದು ಎಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಈ ಪ್ರಾಚ್ಯವಿಜ್ಞಾನದಲ್ಲಿ ಉತ್ತಮ ವಿಚಾರಗಳಿವೆ ಎಂದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ಕಟ್ಟಡ, ಅಲ್ಲಿರುವ ಅಮೂಲ್ಯ ಹಸ್ತಪ್ರತಿಗಳು ಹಳೆಯದಾಗಿವೆ. ಈ ಎರಡರ ನಿರ್ವಹಣೆ ಬಲು ಕಷ್ಟಕರವಾಗಿದೆ. ಇಲ್ಲಿರುವ ಹಸ್ತಪ್ರತಿ, ತಾಳೆಗರಿಗ್ರಂಥಗಳ ಪಟ್ಟಿ ಮಾಡಲು 1 ಕೋಟಿ ರೂ.ದೇಣಿಗೆಯನ್ನು ಶೃಂಗೇರಿ ಶ್ರೀಗಳು ನೀಡಿದ್ದು, ಇದಕ್ಕೆ ವಿವಿ ಅಭಾರಿಯಾಗಿದೆ. ಇಲ್ಲಿರುವ ಹಸ್ತಪ್ರತಿ, ತಾಳೆಗರಿಗಳ ಗ್ರಂಥಗಳನ್ನು ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ದಶರಥನಂದಚರಿತಮ್, ಖಂಡನಖಂಡಖಾದ್ಯಮ್, ರಾಧಾವಿನೋದಕಾವ್ಯಮ್, ನೀತಿಪ್ರಕಾಶಿಕಾ, ಭೋಜರಾಜಕೃತಚಾರುಚರ್ಯಾ ಹಾಗೂ ರಾಜಧರ್ಮಸಾರ ಸಂಗ್ರಹ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿದೇರ್ಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಉಪನಿರ್ದೇಶಕಿ ಡಾ.ಸಿ.ಪಾರ್ವತಿ, ವಿದ್ವಾಂಸರಾದ ಡಾ.ಎಚ್.ವಿ.ನಾಗರಾಜರಾವ್, ಡಾ.ಟಿ.ವಿ.ಸತ್ಯನಾರಾಯಣ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಇತರರಿದ್ದರು.