ತಿ.ನರಸೀಪುರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಅಧ್ಯಕ್ಷತೆಯಲ್ಲಿ ರೈತರ ಕುಂದುಕೊರತೆ ಸಭೆ ಜರುಗಿತು. ಕೊತ್ತೇಗಾಲ ಮಹೇಶ್, ಶಾಂತಮೂರ್ತಿ ಇತರರು ಇದ್ದರು.
ತಿ.ನರಸೀಪುರ: ಜಮೀನಲ್ಲಿ ಸೋಲಾರ್, ಪಂಪ್ ಸೆಟ್ ಮೋಟಾರ್ ಗಳು ಕಳ್ಳತನವಾಗುತ್ತಿವೆ. ಈ ಬಗ್ಗೆ ಸೂಕ್ತ ರಕ್ಷಣೆ ಸಿಗಬೇಕು. ಬ್ಯಾಂಕ್‌ಗಳಲ್ಲಿ ರೈತರು ಹಣ ಪಡೆಯಲು ಗಂಟೆಗಂಟಲೆ ಕಾಯಬೇಕು. ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳಿ ಎನ್ನುವ ಒತ್ತಾಯ ಹೆಚ್ಚುತ್ತಿದ್ದು, ಇದು ನಿಲ್ಲಬೇಕು. ಕೃಷಿ ಇಲಾಖೆಯಿಂದ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರವನ್ನು ಸಮರ್ಪಕವಾಗಿ ಒದಗಿಸಬೇಕು ಎನ್ನುವ ಬೇಡಿಕೆಗಳು ರೈತರ ಕಡೆಯಿಂದ ಕೇಳಿ ಬಂದವು.
ಪುರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ಸುರೇಶ್ ಆಚಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ರೈತರ ಕುಂದುಕೊರತೆ ಸಭೆಯಲ್ಲಿ ರೈತರಿಂದ ಬಂದ ದೂರುಗಳಿವು.
ರೈತ ಮುಖಂಡ ಕೊತ್ತೇಗಾಲ ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಮೀನಿಗೆ ಅಳವಡಿಸಿರುವ ಸೋಲಾರ್ ಹಾಗೂ ಪಂಪ್ ಸೇಟ್ ಮೋಟಾರ್‌ಗಳ ಕಳ್ಳತನವಾಗುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಹಾಗೂ ಮಾನಸಿಕ ಹಿಂಸೆಯಾಗುತ್ತಿದೆ. ಈ ರೀತಿ ಮಾಡುತ್ತಿರುವ ಕಳ್ಳರನ್ನು ಹಿಡಿದು ಶಿಕ್ಷೆ ನೀಡಬೇಕು. ಮೂಗೂರಿನಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕರೊಹಟ್ಟಿ ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಮದ್ಯವ್ಯಸನಿಗಳು ರೈತರ ಜಮೀನುಗಳ ಬಳಿಯೇ ಕುಡಿದು ಬಾಟಲು, ತಿಂಡಿ ತಿನಿಸುಗಳನ್ನು ಬಿಸಾಡಿ ಹೋಗುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು. ಸುಜ್ಜಲೂರು ಚಂದ್ರು ಮಾತನಾಡಿದರು.
ಸಿಪಿಐ ಧನಂಜಯ ಮಾತನಾಡಿ, ಪಟ್ಟಣದ ಪೊಲೀಸ್ ಠಾಣೆಯಲ್ಲಿ 15 ಸಿಬ್ಬಂದಿಗಳ ಕೊರತೆ ಇದೆ. ಇರುವ ಸಿಬ್ಬಂದಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳ್ಳತನ ತಡೆಗಟ್ಟಲು ಮನೆ ಮನೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕ ಸಹಕಾರ ಮುಖ್ಯ ಎಂದರು.
ಕೊತ್ತೇಗಾಲ ಶಾಂತಮೂರ್ತಿ, ದಿನೇಶ್, ಕೇತುಪುರ ರಾಮಚಂದ್ರೇಗೌಡ, ಕಟ್ಟೇಪುರ ಪ್ರಶಾಂತ, ಶಿವಣ್ಣ, ರಮೇಶ್, ಕೃಷ್ಣೇಗೌಡ ಸೇರಿದಂತೆ ಅನೇಕ ರೈತ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳಾದ ಪ್ರಭಾರ ಇಒ ರಂಗಸ್ವಾಮಿ, ಸೆಸ್ಕ್ ಎಇಇ ವೀರೇಶ್, ಟಿಎಚ್‌ಒ ಡಾ.ರವಿಕುಮಾರ್, ರಮಾಕಾಂತ್, ಪಿಡಬ್ಲೂೃಡಿ ಎಇಇ ಸತೀಶ್‌ಚಂದ್ರ, ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ, ನೀರಾವರಿ ಹಾಗೂ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.