ನೀಟ್ ಪರೀಕ್ಷೆಯ ಸಿದ್ಧತೆ ಕುರಿತು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಅವರು ನಗರದಲ್ಲಿ ಶುಕ್ರವಾರ ಸಭೆ ನಡೆಸಿದರು. ಮಿಥಿಲೇಶ್ ಕುಮಾರ್, ಡಾ.ಎನ್.ಆರ್.ಶ್ರೀನಾಥ್, ಶಿವಪ್ರಸಾದ್, ಗುರುರಾಜ್ ಇನ್ನಿತರರಿದ್ದರು. 
ಮೈಸೂರು

ವ್ಯವಸ್ಥಿತ ನೀಟ್ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ನಿರ್ದೇಶನ
  • ಮೈಸೂರು ನಗರದಲ್ಲಿ 21 ಪರೀಕ್ಷಾ ಕೇಂದ್ರಗಳು
  • ಪರೀಕ್ಷೆ ಬರೆಯುವ 7,886 ವಿದ್ಯಾರ್ಥಿಗಳು
ಮೈಸೂರು: ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನೀಟ್ ಪರೀಕ್ಷೆ ಕುರಿತು ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದರು
ಮೈಸೂರು ನಗರದಲ್ಲಿ 21 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 7,886 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಎಂ.ಜಿ.ಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜು, ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು ಸೇರಿದಂತೆ ವಿವಿಧೆಡೆ ಪರೀಕ್ಷೆ ನಡೆಯಲಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ 1 ಪೊಲೀಸ್ ಇನ್ಸ್‌ಪೆಕ್ಟರ್, 3 ಪುರುಷ, 2 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶುಚಿತ್ವ ಕಾಪಾಡುವ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಎಸ್‌ಆರ್‌ಟಿಸಿ ವತಿಯಿಂದ ಪರೀಕ್ಷಾ ಕೇಂದ್ರದ ಮಾರ್ಗದಲ್ಲಿ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳು ತಲುಪುವಂತೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲು ಸೆಸ್ಕ್ ಅಗತ್ಯ ಕ್ರಮ ವಹಿಸಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ವ್ಹೀಲ್ ಚೇರ್ ಮತ್ತು ಅಗತ್ಯ ಕಲ್ಪಿಸಿಕೊಡಬೇಕು ಎಂದೂ ತಿಳಿಸಿದರು.
ನೀಟ್ ಪರೀಕ್ಷೆಯ ಸಂಚಾಲಕ ಮಿಥಿಲೇಶ್ ಕುಮಾರ್ ಮಾತನಾಡಿ, ಪರೀಕ್ಷೆಯ ಮಧ್ಯಾಹ್ನ 2ರಿಂದ 5 ಗಂಟೆಯ ವರೆಗೆ ನಡೆಯಲಿದೆ. ಬೆಳಗ್ಗೆ 11ರಿಂದ ಪರೀಕ್ಷಾರ್ಥಿಗಳ ಬಯೋಮೆಟ್ರಿಕ್ ಸೇರಿದಂತೆ ಇನ್ನಿತರ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1.30ರೊಳಗೆ ಮಾತ್ರ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿರುತ್ತದೆ. ನಂತರ ಪ್ರವೇಶ ಇರುವುದಿಲ್ಲ. ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸಭೆಯಲ್ಲಿ ನೀಟ್ ಪರೀಕ್ಷೆಯ ಸಂಚಾಲಕ ಡಾ.ಎನ್.ಆರ್.ಶ್ರೀನಾಥ್, ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಸೀಲ್ದಾರ್ ಶಿವಪ್ರಸಾದ್, ಅಗ್ನಿಶಾಮಕ ಅಧಿಕಾರಿ ಗುರುರಾಜ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ನೀಟ್ ಪರೀಕ್ಷೆಯ ಸಿದ್ಧತೆ ಕುರಿತು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಅವರು ನಗರದಲ್ಲಿ ಶುಕ್ರವಾರ ಸಭೆ ನಡೆಸಿದರು. ಮಿಥಿಲೇಶ್ ಕುಮಾರ್, ಡಾ.ಎನ್.ಆರ್.ಶ್ರೀನಾಥ್, ಶಿವಪ್ರಸಾದ್, ಗುರುರಾಜ್ ಇನ್ನಿತರರಿದ್ದರು.