ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ನಿತೇಶ್ ಪಾಟೀಲ್ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ, ಪ್ರೊ.ಎನ್.ನಾಗರಾಜ, ಕೆ.ಎಸ್.ರೇಖಾ, ಪಿ.ಎನ್.ಹೇಮಚಂದ್ರ, ಪ್ರೊ.ಆನಂದ ಇದ್ದರು. 
ಮೈಸೂರು

ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಿ: ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಮೋಜು ಮಸ್ತಿಗಷ್ಟೇ ಕಾಲೇಜು ಸಮಯ ಮೀಸಲಿಡಬಾರದು
  • ಕಾಲೇಜು ಸಮಯ ನಿಮ್ಮ ಭವಿಷ್ಯ ನಿರ್ಧರಿಸುತ್ತದೆ
  • ಕಠಿಣ ಪರಿಶ್ರಮ, ಏಕಾಗ್ರತೆ, ಸ್ವಇಚ್ಛೆ ಇದ್ದಾಗ ಗುರಿ ಮುಟ್ಟಲು ಸಾಧ್ಯ
ಮೈಸೂರು: ಕಾಲೇಜು ಸಮಯ ನಿಮ್ಮ ಭವಿಷ್ಯ ನಿರ್ಧರಿಸುವುದರಿಂದ ಭವಿಷ್ಯದ ಬಗ್ಗೆ ದೃಢವಾಗಿ ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಸಿದ್ಧತೆ ನಡೆಸಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಮಾನಸ ಯುವ ಸಂವರ್ಧನೆ ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಠಿಣ ಪರಿಶ್ರಮ, ಏಕಾಗ್ರತೆ, ಸ್ವಇಚ್ಛೆ ಇದ್ದಾಗ ಗುರಿ ಮುಟ್ಟಲು ಸಾಧ್ಯ. ನಮ್ಮ ಗುರಿಯು ಪ್ರತಿ ದಿನ ನಮ್ಮನ್ನು ಕಾಡುತ್ತಿರಬೇಕು. ಕಾಲೇಜು ಸಮಯ ನಿಮ್ಮ ಭವಿಷ್ಯ ನಿರ್ಧರಿಸುವುದರಿಂದ ಅದರ ಬಗ್ಗೆ ಸಿದ್ಧತೆ ನಡೆಸಬೇಕು. ಮೋಜು ಮಸ್ತಿಗಷ್ಟೇ ಕಾಲೇಜು ಸಮಯ ಮೀಸಲಿಡಬಾರದು ಎಂದು ಹೇಳಿದರು.
ಉನ್ನತ ಸ್ಥಾನಕ್ಕೇರಲು ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಪರಿಣಾಮಕಾರಿ ಶಿಕ್ಷಣ ಪಡೆದಿದ್ದೇವೆ ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಯಾವ ರೀತಿಯ ಪರಿಸರದಲ್ಲಿ ನೀವು ಇರುತ್ತೀರಿ ಎನ್ನುವುದು ನಿಮ್ಮ ಜೀವನ ಶೈಲಿ ನಿರ್ಧರಿಸುತ್ತದೆ. ನೀವು ಇರುವ ವಾತಾವರಣ ಹಾಗೂ ಜತೆಗಿರುವ ಸ್ನೇಹಿತರು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಾರೆ. ಹಾಗಾಗಿ ಒಂದೇ ಮನಸ್ಥಿತಿಯ ಗೆಳೆಯರನ್ನು ಹೊಂದಿದ್ದಾಗ ಸಾಧನೆಗೆ ಸಹಕಾರಿಯಾಗುತ್ತದೆ ಎಂದರು. 
ಆದ್ದರಿಂದ ಉತ್ತಮ ಸ್ನೇಹಿತರ ವಲಯವನ್ನು ರೂಪಿಸಿಕೊಳ್ಳಬೇಕಾಗಿರುವುದು ಬಹಳ ಅವಶ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೌಶಲ ಬೆಳೆಸಿಕೊಂಡು ಉದ್ಯೋಗ ವಲಯಕ್ಕೆ ಬೇಕಾದ ವಿಚಾರಗಳನ್ನು ಅಭ್ಯಾಸ ಮಾಡಬೇಕು. ಸಾಧನೆಗೆ ಪರಿಶ್ರಮದ ಹೊರತು ಬೇರೆ ಅಡ್ಡದಾರಿಯಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆಯಾಗಲು ನಿತ್ಯ 8 ಗಂಟೆಯ ಓದು ಸಾಕು. ಅದರಲ್ಲಿ ನಿರಂತರತೆ ಇರಬೇಕು ಎಂದು ಸಲಹೆ ನೀಡಿದರು. 
ಧನಾತ್ಮಕ ವಿಚಾರ ಮಾತಾಡುವವರೊಂದಿಗೆ ವ್ಯವಹರಿಸಿದರೆ ಪ್ರೊತ್ಸಾಹ ದೊರೆಯುತ್ತದೆ. ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಯನ್ನೇ ಎದುರಿಸಿ ಉದ್ಯೋಗ ಮಾಡಬೇಕಾಗಿಲ್ಲ. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯುವುದು ಭವಿಷ್ಯದ ದೃಷ್ಟಿಯಿಂದ ಒಳಿತು ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಸಂಪನ್ಮೂಲ ವ್ಯಕ್ತಿ ಪಿ.ಎನ್.ಹೇಮಚಂದ್ರ, ಕಾರ್ಯಕ್ರಮದ ಕಾರ್ಯಾಧ್ಯಕ್ಷ ಪ್ರೊ.ಆನಂದ ಇತರರಿದ್ದರು.