ಮೈಸೂರು ನಗರದ ಸಾತಗಳ್ಳಿಯಲ್ಲಿ ಕಂಬಳ ನಡೆಸಲು ಗುರುತಿಸಿದ ಜಾಗ ಸಮತಟ್ಟುಗೊಳಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪರಿಸರವಾದಿಗಳು, ಪ್ರತಿಪಕ್ಷ ಹಾಗೂ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ನಡುವೆಯೂ ಜಿಲ್ಲಾಡಳಿತ ಕಂಬಳ ನಡೆಸಲು ಸಿದ್ಧತೆ ಮುಂದುವರೆಸಿದೆ.
ನಗರದ ಹೊರವಲಯದ ಸಾತಗಳ್ಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಮೀಪದ 20 ಎಕರೆ ಪ್ರದೇಶದಲ್ಲಿ ಕಂಬಳ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಈ ಜಾಗವನ್ನು ಸಮತ್ತಟ್ಟು ಮಾಡುವ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಇಲ್ಲಿರುವ ನೂರಾರು ಮರಗಳನ್ನು ತೆರವುಗೊಳಿಸುವ ಕಾರ್ಯ ಮಾತ್ರ ಬಾಕಿ ಉಳಿದುಕೊಂಡಿದೆ. ಈಗಾಗಲೇ 30ಕ್ಕೂ ಹೆಚ್ಚು ಮರಗಳನ್ನು ತೆರವು ಗೊಳಿಸಲಾಗಿದ್ದು, ಈ ಕುರಿತು ಪರಿಸರವಾದಿಗಳು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಕಂಬಳವು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗಗಳಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಕೋಣ ಓಟದ ಕ್ರೀಡೆಯಾಗಿದೆ. ಸಾಮಾನ್ಯವಾಗಿ ಭತ್ತದ ಕೃಷಿ ಮುಗಿದ ಬಳಿಕ ನೀರು ತುಂಬಿದ ಗದ್ದೆಗಳಲ್ಲಿ ಎರಡು ಕೋಣಗಳನ್ನು ಜೋಡಿಸಿ ಓಡಿಸುವ ಸ್ಪರ್ಧೆಯೇ ಕಂಬಳ. ಆರಂಭದಲ್ಲಿ ಇದು ಗ್ರಾಮ ದೇವತೆಗಳಿಗೆ ಸಮರ್ಪಿತ ಧಾರ್ಮಿಕ ಆಚರಣೆಯಾಗಿದ್ದರೆ, ನಂತರ ಜನಪದ ಕ್ರೀಡೆಯಾಗಿ ರೂಪುಗೊಂಡಿತು.
ಕಂಬಳದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಗಳಿದ್ದು, ಕೋಣಗಳ ವೇಗ, ಅವುಗಳ ನಿರ್ವಹಣೆ ಹಾಗೂ ತರಬೇತಿ ಪ್ರಮುಖ ಆಕರ್ಷಣೆಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕಂಬಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದು, ಕರಾವಳಿಯ ಹಲವು ಕಂಬಳಗಳಿಗೆ ಲಕ್ಷಾಂತರ ಮಂದಿ ಪ್ರೇಕ್ಷಕರು ಸೇರುವಷ್ಟು ಜನಪ್ರಿಯತೆ ಗಳಿಸಿದೆ. ದಸರಾ ಸಂದರ್ಭದಲ್ಲಿ ಕಂಬಳ ನಡೆಸಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಮೈಸೂರಿನಲ್ಲಿ ಏಕೆ ವಿವಾದ?
ವಿರೋಧ ವ್ಯಕ್ತಪಡಿಸುತ್ತಿರುವವರ ಪ್ರಮುಖ ಪ್ರಶ್ನೆ ಏನೆಂದರೆ, ಕರಾವಳಿಯ ಕೃಷಿ ಮತ್ತು ಜನಪದ ಸಂಸ್ಕೃತಿಯೊಂದಿಗೆ ಬೆಸೆದುಕೊಂ ಡಿರುವ ಕಂಬಳವನ್ನು ಮೈಸೂರು ದಸರಾದಂತಹ ಐತಿಹಾಸಿಕ ಉತ್ಸವದಲ್ಲಿ ಸೇರಿಸುವ ಅಗತ್ಯವೇನು? ದಸರಾಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ, ಜಂಬೂಸವಾರಿ, ಅರಮನೆ ಸಂಪ್ರದಾಯ, ನಾಡಕಲೆಗಳು ಮತ್ತು ಜನಪದ ಕಾರ್ಯಕ್ರಮಗಳಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಭಾಗದ ಸಂಪ್ರದಾಯವನ್ನು ಸೇರಿಸುವುದು ದಸರಾದ ಮೂಲ ಸ್ವರೂಪವನ್ನು ಬದಲಾಯಿಸಬಹುದೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಅಲ್ಲದೆ, ಬರಗಾಲದ ಛಾಯೆ ಇರುವ ಹಿನ್ನೆಲೆಯಲ್ಲಿ ಕಂಬಳ ನಡೆಸುವ ಮೂಲಕ ದುಂದುವೆಚ್ಚ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಕಂಬಳಕ್ಕಾಗಿ ಆಯ್ಕೆ ಮಾಡಿರುವ ಸಾತಗಳ್ಳಿಯ ಪ್ರದೇಶವು ದಟ್ಟ ಹಸಿರಿನಿಂದ ಕೂಡಿದ್ದು, ನೂರಕ್ಕೂ ಹೆಚ್ಚು ಮರಗಳು ಅಲ್ಲಿವೆ ಎಂದು ಪರಿಸರ ಹೋರಾಟಗಾರರು ಹೇಳುತ್ತಿದ್ದಾರೆ. ಸ್ಥಳ ಸಮತಟ್ಟು ಮಾಡುವ ಕಾಮಗಾರಿಯಿಂದ ಮರಗಳಿಗೆ ಹಾನಿಯಾಗುವ ಹಾಗೂ ಕೆಲವು ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನಗರದ ಹಸಿರು ಹೊದಿಕೆಗೆ ಮತ್ತಷ್ಟು ಪೆಟ್ಟು ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ನೀರಿನ ಬಳಕೆಯೂ ಚರ್ಚೆಯ ಕೇಂದ್ರ
ಕಂಬಳ ಆಯೋಜನೆಗೆ ನೀರು ತುಂಬಿದ ಟ್ರಾೃಕ್ ನಿರ್ಮಿಸಬೇಕಾಗಿರುವುದರಿಂದ ದೊಡ್ಡ ಪ್ರಮಾಣದ ನೀರಿನ ಅಗತ್ಯವಿದೆ. ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಇಷ್ಟೊಂದು ನೀರನ್ನು ಬಳಸುವುದು ಸಮಂಜಸವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕಂಬಳ ನಡೆಸುವ ಬದಲು ಆ ಹಣವನ್ನು ಜನೋಪಯೋಗಿ ಕಾಮಗಾರಿಗಳಿಗೆ ಬಳಸಬಹುದಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ವಿವಾದಗಳ ನಡುವೆಯೂ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀರ್ಮಾನದಂತೆ ದಸರಾದಲ್ಲಿ ಕಂಬಳ ಆಯೋಜನೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಂಬಳವು ಕರಾವಳಿಯ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ. ರಾಜ್ಯದ ಯಾವುದೇ ಭಾಗದ ಸಂಸ್ಕೃತಿ, ಕ್ರೀಡೆ ಮತ್ತು ಆಚರಣೆ ಗಳನ್ನು ಮತ್ತೊಂದು ಭಾಗದ ಜನರಿಗೆ ಪರಿಚಯಿಸುವುದು ಉತ್ತಮ ಬೆಳವಣಿಗೆಯೇ ಹೊರತು ತಪ್ಪಲ್ಲ. ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಉದ್ದೇಶವೇ ಇದರ ಹಿಂದಿದೆ ಎಂದು ಅವರು ಕಂಬಳ ಆಯೋಜನೆಯನ್ನು ಸಮರ್ಥಿಸಿಕೊಂಡಿ ದ್ದಾರೆ. ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಜಿಲ್ಲಾಡಳಿತ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.
ಪರಿಸರವನ್ನು ನಾಶ ಮಾಡಿ ಯಾವುದೇ ಕಾರಣಕ್ಕೂ ದಸರಾ ಸಂದರ್ಭ ಕಂಬಳ ನಡೆಸುವುದು ಸರಿಯಲ್ಲ. ಕಂಬಳ ನಡೆಸಬಾರದು ಎಂದು ಸರ್ಕಾರದ ಗಮನ ಸೆಳೆದಿದ್ದೇವೆ. ಕಂಬಳ ನಡೆಸಲು ಗುರುತಿಸಿರುವ ಜಾಗದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆ, ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದೇವೆ. ನಮ್ಮ ಪ್ರತಿರೋಧದ ನಡುವೆಯೂ ಕಂಬಳ ನಡೆಸಲು ಮುಂದಾದರೆ ಹೋರಾಟ ನಡೆಸಲಾಗುವುದು.