ನಿವೇದಿತ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು. ಟಿ.ಎಸ್.ಶ್ರೀವತ್ಸ, ಜಿ.ಡಿ.ಹರೀಶ್ ಗೌಡ, ಎಲ್.ನಾಗೇಂದ್ರ, ನವೀನ್ ಕುಮಾರ್, ಜೆ.ಎಸ್.ಜಗದೀಶ್, ಡಾ.ಯಶಸ್ವಿನಿ ಸಂಜಯ್ ಇತರರಿದ್ದರು. 
ಮೈಸೂರು

ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ಪ್ರತಿಭಾ ಪುರಸ್ಕಾರ

ಪ್ರಮುಖ ಮುಖ್ಯಾಂಶಗಳು

  • ಪಾಲಕರು ಮಕ್ಕಳ ಬದುಕು ರೂಪಿಸಲಿ: ಜಿ.ಡಿ.ಹರೀಶ್ ಗೌಡ
  • 300ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು.
ಪಾಲಕರು ಮಕ್ಕಳ ಬಗ್ಗೆ ಕನಸು ಕಾಣುವ ಜತೆಗೆ ಅವರ ಬದುಕು ರೂಪಿಸುವ ಕೆಲಸ ಮಾಡಬೇಕು. ಪಾಲಕರು ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಅವರಿಗೆ ದಾರಿ ತೋರಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ನಿವೇದಿತ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಎಲ್ಲ ಸಾಧಕರು ಕಷ್ಟದಲ್ಲೇ ಮೇಲೆ ಬಂದಿದ್ದಾರೆ. ಪಾಲಕರು ಮಕ್ಕಳಿಗೆ ಕಷ್ಟ ಪರಿಚಯ ಮಾಡಿಸಬೇಕು. ಜೆ.ಎಸ್.ಜಗದೀಶ್ ಅವರು ಪಿಯು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳು ವಿದ್ಯಾವಂತರಾಗಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಂದೆ-ತಾಯಿಗಳನ್ನು ಗೌರವದಿಂದ ಕಾಣುವ ಜತೆಗೆ ಚೆನ್ನಾಗಿ ನೋಡಿಕೊಳ್ಳಬೇಕು. ದೇಶದ ಉತ್ತಮ ಪ್ರಜೆ ಆಗಿ ಬೆಳೆಯಬೇಕು. ಶಿಕ್ಷಣದ ಜತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು ಎಂದು ತಿಳಿಸಿದರು.
ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವೈದ್ಯ, ಕಲಾವಿದ, ವಕೀಲ, ಉತ್ತಮ ಅಧಿಕಾರಿ, ಇಂಜಿನಿಯರ್ ಆಗಬಹುದು. ಪಿಯು ನಂತರ ಅನೇಕ ಅವಕಾಶಗಳಿವೆ. ನಿಮ್ಮ ಮುಂದೆ ಅಪಾರ ಅವಕಾಶ ಇದ್ದು, ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಮಾತನಾಡಿ, 15 ವರ್ಷದಿಂದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗಿದೆ. ಇಂತಹ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಮಕ್ಕಳನ್ನು ಉತ್ತೇಜಿಸುವ ದೃಷ್ಟಿಯಿಂದ ಪುರಸ್ಕರಿಸಲಾಗುತ್ತಿದೆ. ಇಲ್ಲಿವರೆಗೆ 2000ಕ್ಕೂ ಹೆಚ್ಚು ಮಕ್ಕಳನ್ನು ಅಭಿನಂದಿಸಿದ್ದೇವೆ ಎಂದರು.
ವೈದ್ಯೆ ಡಾ.ಯಶಸ್ವಿನಿ ಸಂಜಯ್ ಮಾತನಾಡಿ, ಎಸ್‌ಎಸ್ ಎಲ್‌ಸಿ, ಪಿಯು ವಿದ್ಯಾರ್ಥಿಗಳ ಪ್ರಮುಖ ಹಂತ. ಈ ಹಂತದಲ್ಲಿ ಎಲ್ಲರೂ ಉತ್ತಮವಾಗಿ ಓದಿ ಹೆಚ್ಚು ಅಂಕ ಪಡೆಯಬೇಕು. ಶ್ರದ್ಧೆ ಇದ್ದರೆ ಏನೂ ಬೇಕಾದರೂ ಸಾಧನೆ ಮಾಡಬಹುದಾಗಿದೆ. ಶ್ರದ್ಧೆ, ಪರಿಶ್ರಮ ಇದ್ದರೆ ಫಲ ಸಿಗುತ್ತದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮಾತನಾಡಿ, ಸಮಾಜಕ್ಕೆ ಮೌಲ್ಯಯುತ ಶಿಕ್ಷಣ ಬೇಕಾಗಿದೆ. ಸಮ ಸಮಾಜ ಕಟ್ಟು ಶಿಕ್ಷಣ ಬೇಕು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಮುಖಂಡರಾದ ಆಯರಹಳ್ಳಿ ವಿರೂಪಾಕ್ಷ, ಲೋಹಿತ್‌ಶರ್ಮ, ಶ್ರೀನಿವಾಸ್, ಸತ್ಯಾನಂದವಿಟ್ಟು, ಪ್ರಸನ್ನ ಕುಮಾರ್, ಮೋಹನ್, ರಘು, ರವಿ ಇತರರಿದ್ದರು. ಇದೇ ವೇಳೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ 300ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು.