ಸರಗೂರು ತಾಲೂಕಿನ ಪಟ್ಟಣದ ಜೆಎಸ್‌ಎಸ್ ಶಾಲೆಯಲ್ಲಿ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ರಾಜು, ಸಿಅರ್ ಪಿ ಮಂಜುನಾಥ್, ಪ್ರಾಂಶುಪಾಲ ಮಹದೇವಸ್ವಾಮಿ ಇತರರು ಇದ್ದರು.  sgr
ಮೈಸೂರು

ಬೋಧನೆಯೊಂದಿಗೆ ಪಠ್ಯೇತರ ಚಟುವಟಿಕೆಯೂ ಮುಖ್ಯ

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ರಾಜು ಸಲಹೆ

ಸರಗೂರು : ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರ ತರುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ರಾಜು ಹೇಳಿದರು. ಪಟ್ಟಣದ ಜೆಎಸ್‌ಎಸ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರಗೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2007ರಲ್ಲಿ ಶಾಲಾ ಹಂತದಲ್ಲಿ ಪ್ರತಿಭೆ ಕಾರಂಜಿ ಅಂಗವಾಗಿ ಎರಡು ದಿನಗಳ ಕಾಲ 47 ಚಟುವಟಿಕೆಗಳು ನಡೆಯುತ್ತಿದ್ದವು. ಪ್ರತಿಭೆ ಪ್ರದರ್ಶನಕ್ಕೆ ಸಮಯದ ಮಿತಿ ಆಗ ಕಡಿಮೆ ಇತ್ತು. ಬದಲಾದ ಕಾಲ ಘಟ್ಟದಲ್ಲಿ ಚಟುವಟಿಕೆಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಕಲಿಯುವ ಆಸಕ್ತಿ ಇದ್ದರೂ ಶಿಕ್ಷಕರ ಆಸಕ್ತಿ ಕಡಿಮೆ ಆಗಿದೆ. ಬೋಧನೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶಿಕ್ಷಕರು ಸದಾ ಮುಂಚೂಣಿಯಲ್ಲಿ ಇದ್ದಾಗ ಮಾತ್ರ ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ಪ್ರತಿಭೆ ಹೊರ ಬರಲಿದೆ ಎಂದರು.

ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಶಾಲೆಯ ಕೆಲಸದ ಒತ್ತಡದ ನೆಪವೊಡ್ಡಿ ಓದಿನಲ್ಲಿ ಮುಂದಿರುವ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಅವರನ್ನೇ ಪ್ರತಿಭಾ ಕಾರಂಜಿ, ಕ್ರೀಡೆ ಸೇರಿದಂತೆ ಇನ್ನಿತರ ಎಲ್ಲಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸಾಧಾರಣ ಕಲಿಕಾ ಮಟ್ಟದ ಚಿಣ್ಣರನ್ನೂ ತರಬೇತುಗೊಳಿಸಿದರೆ ಇನ್ನಷ್ಟು ಪ್ರತಿಭೆಗಳು ಹೊರ ಬರುತ್ತವೆ ಎಂದು ಬಿ.ಎನ್.ರಾಜು ಹೇಳಿದರು. ವೇಷಭೂಷಣ ಸೇರಿದಂತೆ ಯಾವುದೇ ವಿಷಯದ ಸ್ಪರ್ಧೆಗೆ ಮುನ್ನ ಮಕ್ಕಳಿಗೆ ಅದರ ಪೂರ್ವಾಪರ ಪರಿಚಯ ಮಾಡಿಸಬೇಕು. ಇದು ಪಾಲಕರ ಮತ್ತು ಶಿಕ್ಷಕರ ಜವಾಬ್ದಾರಿ ಎಂದು ಅವರು ಹೇಳಿದರು.

ಸಿಅರ್ ಪಿ ಮಂಜುನಾಥ್ ಮಾತನಾಡಿ, ಮಕ್ಕಳು ಸ್ಪರ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಪ್ರತಿಭೆ ಹೊರ ಬರಲು ಸಾಧ್ಯ ಎಂದರು. ತೀರ್ಪುಗಾರರು ಕ್ರಿಯಾಶೀಲತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಶಿಕ್ಷಕರಾದ ರವೀಂದ್ರ ಬಾಬು, ತಿಪ್ಪೇಸ್ವಾಮಿ, ರೇಖಾ, ನಾಗರತ್ನಾ, ಲೋಕೇಶ್ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳು ಪ್ರತಿಭೆ ಪ್ರದರ್ಶಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.