ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ. ಪ್ರೊ.ಡಿ.ಆನಂದ್, ಪ್ರೊ.ರಾಜಪ್ಪ ದಳವಾಯಿ, ಬಳಗದ ಪದಾಧಿಕಾರಿಗಳು ಇದ್ದರು.
ಮೈಸೂರು: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಡಬಾರದು ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಬಳಗದ ಎಂಟನೇ ವಾರ್ಷಿಕೋತ್ಸವ, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭವನ್ನು ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವು ಯಾರಿಗೆ ಅಧಿಕಾರ ಕೊಡ್ತೀವಿ ಎಂಬುದು ಮುಖ್ಯವಾಗುತ್ತದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಸಾಮಾಜಿಕ ನ್ಯಾಯ ಕೊಡುವವರಿಗೆ ಕೈಗೆ ಅಧಿಕಾರ ನೀಡಿದರೆ ಸಂವಿಧಾನ ಉಳಿಯುತ್ತದೆ ಎಂದರು.
ಆದರೆ ಇತ್ತೀಚಿನ ದಿನಮಾನಗಳಲ್ಲಿ ಸಂವಿಧಾನ ವಿರೋಧಿಗಳು ಪ್ರಬಲರಾಗುತ್ತಿದ್ದಾರೆ. ಅವರೇ ಹೆಚ್ಚೆಚ್ಚು ಅಧಿಕಾರಕ್ಕೆ ಬರುತ್ತಿದ್ದಾರೆ. ಇದು ಅಪಾಯಕಾರಿ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.
ಡಾ.ಎಚ್.ಸಿ. ಮಹದೇವಪ್ಪ ಅವರು ಅಪರೂಪದ ರಾಜಕಾರಣಿ ಹಾಗೂ ಅಪರೂಪದ ನಾಯಕರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳಲ್ಲಿ ತಿಳಿಸಿರುವಂತೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಸಾಹಿತಿ ಪ್ರೊ.ರಾಜಪ್ಪ ದಳವಾಯಿ, ಮೈವಿವಿ ಹಿರಿಯ ಪ್ರಾಧ್ಯಾಪಕ ಡಾ.ಡಿ.ಆನಂದ್, ಬಳಗದ ಗೌರವಾಧ್ಯಕ್ಷ ಬನ್ನೂರಿನ ಎಂ.ಎನ್. ಸ್ವಾಮಿ, ಅಧ್ಯಕ್ಷ ಹಿನ್ಕಲ್ ನಂಜುಂಡ, ಉಪಾಧ್ಯಕ್ಷ ಕಡಕೊಳ ಕೆ.ವಿ. ಭರತರಾಜ್, ಕಾರ್ಯದರ್ಶಿ ಹರದನಹಳ್ಳಿ ಆರ್. ಮಹೇಶ್, ಖಜಾಂಚಿ ದಡದಹಳ್ಳಿ ಬಿ.ಎಂ. ಮಹದೇವ್ ಇತರರಿದ್ದರು.
ಇದೇ ವೇಳೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಂಡ್ಯದ ದಸಂಸ ಹಿರಿಯ ಹೋರಾಟಗಾರ ಗುರುಪ್ರಸಾದ್ ಕೆರೆಗೋಡು, ಜಯದೇವ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಪಶುಪತಿ, ಸರಗೂರು ತಾ. ಪ್ರಗತಿಪರ ರೈತ ಕೆ.ಜಿ. ಗೋಪಾಲಯ್ಯ, ಆಕಾಶವಾಣಿ ಕಲಾವಿದೆ, ಸೋಬಾನೆ ಗಿರಿಜಮ್ಮ, ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಕುರುಬೂರಿನ ಬಿ. ಚೈತ್ರಾ, ಮಲಬಾರ್ ಗೋಲ್ಡ್ ದಕ್ಷಿಣ ವಲಯ ಮುಖ್ಯಸ್ಥ ಶರ್ಫುದ್ದೀನ್, ವಾಸ್ತುಶಿಲ್ಪ ಕಲಾವಿದ ಬನ್ನೂರಿನ ರಮೇಶ್ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹನೂರು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಆರ್. ಸಂಜನಾ ಸನ್ಮಾನಿಸಲಾಯಿತು.