ಮೈಸೂರು: ಅಧಿಕಾರ ಹಂಚಿಕೆ ಗೊಂದಲವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎರಡು ದಿನಗಳಲ್ಲಿ ಬಗೆಹರಿಸಲಿದೆ ಎಂದು ಶಾಸಕ ತನ್ವೀರ್ ಸೇಠ್ ವಿಶ್ವಾಸವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಮೊದಲೇ ತಮ್ಮ ನಿಲುವನ್ನುಸ್ಪಷ್ಟಪಡಿಸಬೇಕಿತ್ತು. ಅದು ತಡವಾಗಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಒಪ್ಪಂದ ಆಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ಗೊಂದಲ ಎರಡೂವರೆ ವರ್ಷದಿಂದ ಮುಂದುವರೆದಿದೆ. ಅದು ಅಪಾಯಕಾರಿ ಹಂತ ತಲುಪುವ ಎಲ್ಲ ಲಕ್ಷಣ ಕಾಣುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ತನ್ನ ನಿರ್ಧಾರ ಹೇಳಲಿದೆ. ಈ ಎಲ್ಲ ಬೆಳವಣಿಗೆಯಿಂದ ಪಕ್ಷಕ್ಕೇನು ನಷ್ಟ ಇಲ್ಲ. ಆದರೆ ಗೊಂದಲ ಆಗಬಾರದು ಎಂದರು.
ಹೈಕಮಾಂಡ್ ನಾಯಕರ ಬಳಿ ಮಾತುಕತೆ ನಡೆದ ಸಂದರ್ಭದಲ್ಲಿ ಯಾರು ಇರಲಿಲ್ಲ. ಯಾರು ಮಾತು ಕೊಟ್ಟಿದ್ದಾರೆ? ಯಾರು ಮಾತು ಕೊಟ್ಟಿಲ್ಲ? ಯಾರು ಮಾತು ತಪ್ಪಿದ್ದಾರೆಂದು ಮಾತುಕತೆ ವೇಳೆ ಇದ್ದವರಿಗೆ ಗೊತ್ತು. ಕಾಂಗ್ರೆಸ್ ಶಾಸಕರ ಮುಂದೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.