ಬನ್ನೂರಿನ ಸಂತೆಮಳದಲ್ಲಿ ಕಬ್ಬು ಬೆಳೆಗಾರ ಸಂಘದ ಗ್ರಾಮಾಂತರ ಘಟಕದಿಂದ ಕಲಬುರ್ಗಿಯಲ್ಲಿ ಹಮ್ಮಿಕೊಂಡಿರುವ ವಿಶ್ವ ರೈತ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ರೈತರ ಸಮಾವೇಶದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಅತ್ತಹಳ್ಳಿ ದೇವರಾಜು, ಹೆಗ್ಗೂರು ರಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.  
ಮೈಸೂರು

ರಾಜ್ಯ ಮಟ್ಟದ ರೈತ ಸಮಾವೇಶದ ಪೋಸ್ಟರ್ ಬಿಡುಗಡೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರೈತ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ರೈತರ ಸಮಾವೇಶ ಪೋಸ್ಟರ್‌ ಬಿಡುಗಡೆ
ಬನ್ನೂರು: ವಿಶ್ವ ರೈತ ದಿನಾಚರಣೆ ಅಂಗವಾಗಿ ಡಿ.23ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ರೈತರ ಸಮಾವೇಶದ ಪೋಸ್ಟರ್‌ಗಳನ್ನು ಬನ್ನೂರು ಗ್ರಾಮಾಂತರ ಘಟಕದಿಂದ ಪಟ್ಟಣದ ಸಂತೆಮಾಳದಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ, ಕಲಬುರಗಿಯ ಎಂ.ಎಸ್. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ರೈತರ ಸಮಾವೇಶ ಹಮ್ಮಿಕೊಂಡಿದ್ದು, ತಾಲೂಕಿನಿಂದ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಈ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗುವುದು. ಈ ಸಮಾವೇಶಕ್ಕೆ ವಿವಿಧ ರಾಜ್ಯಗಳಿಂದ ರೈತ ಮುಖಂಡರು ರೈತರು ಅಗಮಿಸುತ್ತಿದ್ದಾರೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಮನ್ನಾ ಆಗಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೈಬಿಡಬೇಕು. ಕೃಷಿ ಭೂಮಿ ಮುಟ್ಟುಗೋಲು ಕಾಯ್ದೆ ರದ್ದಾಗಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಬೇಕು. ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕೃಷಿ ಭೂಮಿ, ನೀರು, ಅರಣ್ಯ ಪರಿಸರ ರಕ್ಷಿಸಲು ಜಲಾಶಯಗಳು ಸೇರಿದಂತೆ ಎಲ್ಲ್ಲ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸಿ, ಹೂಳು ತೆಗೆದು ರೈತರ ಜಮೀನಿಗೆ ನೀರು ಹರಿಸುವಂತಹ ಕಾರ್ಯ ಜಾರಿಗೆ ತರಬೇಕು. ಕಬ್ಬಿನ ಎಫ್‌ಆರ್‌ಪಿ ದರ, ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಫಸಲ್ ಬಿಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಸಂಘದ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಬನ್ನೂರು ಗ್ರಾಮಾಂತರ ಘಟಕದ ಮುಖಂಡ ಅತ್ತಳ್ಳಿ ಲಿಂಗಣ್ಣ, ಅರುಣ್, ಕುಮಾರ್, ಬನ್ನೂರು ಸೂರಿ, ಶ್ರೀನಿವಾಸ್, ಕುಂತನಹಳ್ಳಿ ಕುಳ್ಳೇಗೌಡ, ಎ.ಪಿ.ನವೀನ್, ಮಹೇಶ್, ವೈ.ನಟೇಶ್, ಹೊನ್ನಯ್ಯ, ಬೀಡನಹಳ್ಳಿ ನಂಜುಂಡ, ಹೆಗ್ಗೂರು ವೀರಂಕೇಗೌಡ, ರಾಚಪ್ಪಾಜಿ, ಅಂಬರೀಶ್, ಶಿವಣ್ಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಎಲ್ಲಾ ರೈತ ಮುಖಂಡರು ಉಪಸ್ಥಿತರಿದ್ದರು.