ಅಂಚೆ ಇಲಾಖೆಯಿಂದ ಐದು ದಿನಗಳ ಕಾಲ ನಗರದಲ್ಲಿ ಆಯೋಜಿಸಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೆಳನಕ್ಕೆ ಜಿತೇಂದ್ರ ಗುಪ್ತಾ ಚಾಲನೆ ನೀಡಿದರು. ಡಾ.ಮೈಸೂರು ಎಂ.ಮಂಜುನಾಥ್, ಮೈಸೂರು ಎಂ. ನಾಗರಾಜ್, ಕೆ. ಪ್ರಕಾಶ್, ಸಂದೇಶ್ ಮಹದೇವಪ್ಪ, ವಿ. ತಾರಾ, ಡಾ.ಆಶಿಶ್‌ಸಿಂಗ್ ಠಾಕೂರ್ ಇತರರು ಇದ್ದರು. 
ಮೈಸೂರು

ಜನರ ಭಾವನೆಯೊಂದಿಗೆ ಬೆಸೆದಿದೆ ಅಂಚೆ ಇಲಾಖೆ: ವಿದ್ವಾನ್ ಡಾ.ಮೈಸೂರು ಎಂ.ಮಂಜುನಾಥ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಬೇರೆ ಇಲಾಖೆಗಳಿಗಿಂತ ಭಿನ್ನವಾಗಿರುವ ಅಂಚೆ ಇಲಾಖೆ ಜನರ ಸುಖ, ದುಃಖಗಳನ್ನು ಮತ್ತೊಬ್ಬರಿಗೆ ತಲುಪಿಸುವ ಮೂಲಕ ಹತ್ತಿರವಾಗಿದೆ
  • ಅಂಚೆ ಚೀಟಿಗಳು ನಮ್ಮ ಇತಿಹಾಸವನ್ನು ಸಾರಿ ಹೇಳುತ್ತಿವೆ
ಮೈಸೂರು:ನೇರ ಸಂಪರ್ಕ ಹೊಂದಿರುವ ಅಂಚೆ ಇಲಾಖೆ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ವಯೋಲಿನ್ ವಾದಕ ವಿದ್ವಾನ್ ಡಾ.ಮೈಸೂರು ಎಂ.ಮಂಜುನಾಥ್ ಹೇಳಿದರು.
ಅಂಚೆ ಇಲಾಖೆಯಿಂದ ಐದು ದಿನಗಳ ಕಾಲ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು.
ಬೇರೆ ಇಲಾಖೆಗಳಿಗಿಂತ ಭಿನ್ನವಾಗಿರುವ ಅಂಚೆ ಇಲಾಖೆ ಜನರ ಸುಖ, ದುಃಖಗಳನ್ನು ಮತ್ತೊಬ್ಬರಿಗೆ ತಲುಪಿಸುವ ಮೂಲಕ ಹತ್ತಿರವಾಗಿದೆ. ಇದರಿಂದ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಅಂಚೆ ಇಲಾಖೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದಿದೆ ಎಂದರು.
ಆಯಾ ಕಾಲಘಟ್ಟಗಳಲ್ಲಿ ಸಂಭವಿಸಿದ ಪ್ರಮುಖ ಘಟನೆಗಳನ್ನು ಅಂಚೆ ಚೀಟಿ ಹೊರ ತರಲುವ ಮೂಲಕ ಸದಾ ಸ್ಮರಣೀಯವಾಗಿಸುತ್ತ ಬಂದಿದೆ. ಅಂಚೆ ಚೀಟಿಗಳು ನಮ್ಮ ಇತಿಹಾಸವನ್ನು ಸಾರಿ ಹೇಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನ ಕಾರ್ಯದಲ್ಲಿ ತೊಡಗಿರುವ ಅಂಚೆ ಇಲಾಖೆ ಸಿಬ್ಬಂದಿ ತಮ್ಮಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರಸ್ತುತಪಡಿಸಲು 38ನೇ ಅಖಿಲ ಭಾರತ ಸಂಗೀತ ಸಮ್ಮೇಳನ ವೇದಿಕೆಯಾಗಿದೆ. ಅತ್ಯಂತ ಶ್ರೀಮಂತಿಕೆಯ ಕಲೆ, ಸಾಹಿತ್ಯ, ಸಂಗೀತವನ್ನು ಹೊಂದಿರುವ ದೇಶದಲ್ಲಿ ನಮ್ಮ ಮಕ್ಕಳಿಗೆ ಇದನ್ನು ಕಲಿಸಬೇಕಾದ ಅಗತ್ಯವಿದೆ ಎಂದರು.
ಈ ರೀತಿಯ ನಿರಂತರ ಸಂಗೀತ ಕಾರ್ಯಕ್ರಮಗಳು ಹಾಗೂ ಅಪ್ರತಿಮ ಕಲಾವಿದರ ಸೇವೆ ಕಾರಣಕ್ಕೆ ಎಲ್ಲ ದೇಶಗಳೂ ಭಾರತೀಯ ಸಂಗೀತ ಪರಂಪರೆಯನ್ನು ಗೌರವಿಸುತ್ತವೆ. ಹಾಗಾಗಿಯೇ ಸಂಗೀತವನ್ನೇ ನನ್ನ ತಾಯಿ ಭಾಷೆ ಎಂದು ಮನಗೊಂಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಂಚೆ ಸೇವೆಗಳ ಮಹಾನಿರ್ದೇಶಕ ಜಿತೇಂದ್ರ ಗುಪ್ತಾ ಮಾತನಾಡಿ, ದೇಶದ ಪ್ರದರ್ಶನ ಕಲೆಗಳ ವೈವಿಧ್ಯತೆಯನ್ನು ತೆರೆದಿಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದ ಮೂಲಕ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಟ್ಟಂತೆ ಆಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಮಾತನಾಡಿ, ಕ್ರೀಡೆಯಲ್ಲಿ ನಾವು ಸಾಮಾನ್ಯವಾಗಿ ಗೆಲ್ಲಲೇಬೇಕು ಎಂಬ ಛಲವನ್ನು ಹಾಗೂ ಮನೋಭಾವವನ್ನು ಕಾಣುತ್ತೆವೆ. ಆದರೆ ಗಾಯನ, ನೃತ್ಯ, ತಾಳ ವಾದ್ಯಗಳು ಹೊಸದೊಂದು ಸಂಗೀತ ಲೋಕವನ್ನೇ ಸೃಷ್ಟಿಸುವ ಸಾಂಸ್ಕೃತಿಕ ಸ್ಪರ್ಧೆಗಳು ಒಂದು ವಿಶೇಷ ಆಸಕ್ತಿಯನ್ನು ಮೂಡಿಸುತ್ತವೆ ಎಂದು ಬಣ್ಣಿಸಿದರು.
ಸಮ್ಮೇಳನದ ನೆನಪಿನ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ವಿದ್ವಾನ್ ಮೈಸೂರು ಎಂ. ನಾಗರಾಜ್, ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ, ಬೆಂಗಳೂರು ಕೇಂದ್ರ ವಲಯದ ನಿರ್ದೇಶಕಿ ವಿ. ತಾರಾ, ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಡಾ.ಆಶಿಶ್‌ಸಿಂಗ್ ಠಾಕೂರ್ ಇತರರು ಇದ್ದರು.
ಸಾಂಸ್ಕೃತಿಕ ಕಲರವ
38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ಸಾಂಸ್ಕೃತಿಕ ಕಲರವ ಅನಾವರಣಗೊಂಡಿತು. ವಿವಿಧ ರಾಜ್ಯಗಳಿಂದ ಆಗಮಿಸಿರುವ ಅಂಚೆ 21ವೃತ್ತಗಳಿಂದ ಒಟ್ಟು 335 ಸಿಬ್ಬಂದಿ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ನೃತ್ಯ, ಗಾಯನ, ಪಕ್ಕಾ ವಾದ್ಯ, ಸಂಗೀತ ಸೇರಿದಂತೆ ನಾನಾ ಪ್ರಕಾರಗಳಲ್ಲಿ ತಮ್ಮ ಸಾಮರ್ಥ್ಯ ತೆರೆದಿಡಲಿದ್ದಾರೆ.
ಏಕವ್ಯಕ್ತಿ ಶಾಸ್ತ್ರಿಯ ನೃತ್ಯ, ಕುಚುಪುಡಿ, ಕಥಕ್(ಜೂನಿಯರ್, ಸೀನಿಯರ್), ಕರ್ನಾಟಕ ಶೈಲಿಯ ಶಾಸ್ತ್ರಿಯ ಸಂಗೀತ ಗಾಯನ(ಜೂನಿಯರ್, ಸೀನಿಯರ್), ಮೃದಂಗ, ಕೊಳಲು, ವಯೊಲಿನ್, ಘಟಂ, ವೀಣೆ, ನಾದಸ್ವರ ಶಾಸ್ತ್ರಿಯ ಸಂಗೀತ(ಜೂನಿಯರ್, ಸೀನಿಯರ್), ಹಿಂದೂಸ್ತಾನಿ ಗಾಯನ(ಜೂನಿಯರ್, ಸೀನಿಯರ್) ಸ್ಪರ್ಧೆಗಳು ವಿವಿಧ ಹಂತದಲ್ಲಿ ನಡೆಯಲಿವೆ.