ಡಾ.ಕೆ.ಬಿ.ಲಿಂಗರಾಜು 
ಮೈಸೂರು

ಪೋರ್ಟ್ ಆಧಾರಿತ ಕೈಗಾರಿಕಾ ಅಭಿವೃದ್ಧಿ ಮುಖ್ಯ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಹೇಳಿಕೆ
ಮೈಸೂರು: ಪ್ರಸ್ತುತ ಪೋರ್ಟ್ ಆಧಾರಿತ ಕೈಗಾರಿಕೆ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ತಿಳಿಸಿದರು.
ಮೈಸೂರು ಮತ್ತು ನಂಜನಗೂಡು ಪ್ರದೇಶದ ಆಮದು, ರಫ್ತು ವ್ಯಾಪಾರ ವೃದ್ಧಿಸುವ ಉದ್ದೇಶದಿಂದ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (ಎನ್‌ಎಂಪಿಎ) ಮತ್ತು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಮಾತನಾಡಿದರು. ನೂತನ ಮಂಗಳೂರು ಬಂದರು ನಮ್ಮ ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಜಾಗತಿಕ ಮಾರುಕಟ್ಟೆಗೆ ಉದ್ಯಮಗಳನ್ನು ಸಂಪರ್ಕಿಸುವ ಪ್ರಬಲ ಶಕ್ತಿಯಾಗಿದೆ. ಮೈಸೂರು ನಗರವು ಐಟಿ, ಶಿಕ್ಷಣ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಪ್ರಮುಖ ಕೇಂದ್ರವಾಗಿದೆ. ಮೈಸೂರಿನ ನಂಜನಗೂಡು ಪ್ರದೇಶದಲ್ಲಿ ಫಾರ್ಮಾಸ್ಯೂಟಿಕಲ್ಸ್, ಆಹಾರ ಸಂಸ್ಕರಣೆ, ರಾಸಾಯನಿಕ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಆಗುತ್ತಿವೆ. ಈ ಪ್ರದೇಶವನ್ನು ಕೈಗಾರಿಕೆ ಬೆಳವಣಿಗೆಗಳ ಇಂಜಿನ್ ಎಂದು ಕರೆಯಬಹುದು ಎಂದರು.
ಎನ್‌ಎಂಪಿಎ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಮಾತನಾಡಿ, ಬಂದರಿನ ಮೂಲಸೌಕರ್ಯ ಅಭಿವೃದ್ಧಿ, ಭವಿಷ್ಯದ ವಿಸ್ತರಣಾ ಯೋಜನೆಗಳು ಮತ್ತು ಗ್ರಾಹಕ-ಕೇಂದ್ರಿತ ಉಪಕ್ರಮಗಳು ಹಾಗೂ ಮೈಸೂರು-ನಂಜನಗೂಡು ಭಾಗದ ವ್ಯಾಪಾರಕ್ಕೆ ಅಗತ್ಯ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಮಂಗಳೂರು ಬಂದರಿನ ಟ್ರಾಫಿಕ್ ಮ್ಯಾನೇಜರ್ ಕೆ.ರಾಜೇಂದ್ರ ಕುಮಾರ್ ಮಾತನಾಡಿ, ಕರ್ನಾಟಕ ಮತ್ತು ಇನ್ನಿತರ ಪ್ರದೇಶದ ವ್ಯಾಪಾರ ಹೆಚ್ಚಿಸುವಲ್ಲಿ ಬಂದರಿನ ಪಾತ್ರ ವಿವರಿಸಿದರು.
ಕಸ್ಟಮ್ಸ್ ಆಯುಕ್ತೆ ಪಿ.ವಿನೀತಾ ಶೇಖರ್ ಅವರು, ವ್ಯಾಪಾರ ಸೌಲಭ್ಯ ಕ್ರಮಗಳು ಮತ್ತು ವ್ಯಾಪಾರ ಸುಲಭಕ್ಕಾಗಿ ಸಮನ್ವಯ ಪ್ರಯತ್ನಗಳ ಮಹತ್ವ ತಿಳಿಸಿದರು.
ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ದಿನೇಶ್ ಕುಮಾರ್, ಎನ್‌ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ, ಕರ್ನಾಟಕ ಕಡಲ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಸಿ. ಬಾಲಚಂದ್ರ ಇದ್ದರು.