ನಗರದ ಇಂಜಿನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು. ಪ್ರೊ.ಡಿ.ರವಿಶಂಕರ್, ಪ್ರೊ.ಕುಮುದಾ ಮಯೂರ್, ಎಂ.ಕೆ.ನಂಜಯ್ಯ, ಆಸೀಫ್ ಇಕ್ಬಾಲ್ ಖಾಲೀಲ್ ಇದ್ದರು. 
ಮೈಸೂರು

ಜನಸಂಖ್ಯೆ ಹೆಚ್ಚಳವೇ ಪರಿಸರಕ್ಕೆ ಕಂಟಕ

ಪ್ರಮುಖ ಮುಖ್ಯಾಂಶಗಳು

  • ಎಸ್‌ಜೆಸಿಇ ಪರಿಸರ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ರವಿಶಂಕರ್ ಹೇಳಿಕೆ
  • ಪರಿಸರ ಕುರಿತು ಗೌರವಯುತ ಭಾವನೆ ಈಗಿಲ್ಲ. ಸ್ವಾರ್ಥ, ಸ್ವಹಿತಕ್ಕೆ ಪ್ರಕೃತಿ ಬಲಿ
 ಮೈಸೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಪರಿಸರ ಸಂರಕ್ಷಣೆ ಮಾಡಲು ಆಗಲ್ಲ. ಇದು ಪ್ರತಿಯೊಬ್ಬರ ಮನೋಭಾವ, ಮನಸ್ಥಿತಿ ಪರಿವರ್ತನೆಯಿಂದಾಗುವ ಕೆಲಸ ಎಂದು ಎಸ್‌ಜೆಸಿಇ ಪರಿಸರ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ರವಿಶಂಕರ್ ಹೇಳಿದರು.
ದಿ ಇಂಡಿಯನ್ ವಾಟರ್ ವರ್ಕ್ಸ್ ಅಸೋಸಿಯೇಷನ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದಲ್ಲಿ ನಗರದ ಇಂಜಿನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಕುರಿತು ಗೌರವಯುತ ಭಾವನೆ ಈಗಿಲ್ಲ. ಸ್ವಾರ್ಥ, ಸ್ವಹಿತಕ್ಕೆ ಪ್ರಕೃತಿ ಬಲಿಯಾಗುತ್ತಿದೆ. ಹೀಗೆ ಸಾಗಿದರೆ ಭವಿಷ್ಯ ಉಳಿಗಾಲವೇ ಇಲ್ಲ. ಪರಿಸರ ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಬಾಹ್ಯವಲ್ಲ, ಆಂತರಿಕವಾಗಿಯೇ ಬದಲಾವಣೆಯಾಗಬೇಕು. ಪ್ರವೃತ್ತಿ ರಕ್ಷಿಸಬೇಕೆಂಬ ಮನಸ್ಸಿನಿಂದಲೇ ಬರಬೇಕು ಎಂದರು.
ಜನಸಂಖ್ಯೆ ಹೆಚ್ಚಳವೇ ಪರಿಸರಕ್ಕೆ ದೊಡ್ಡ ಕಂಟಕವಾಗಿದೆ. ಸಾವಿರ ವರ್ಷಗಳ ಹಿಂದೆ ಇಡೀ ಜಗತ್ತಿನ ಜನಸಂಖ್ಯೆ ಅಂದಾಜು 25 ಕೋಟಿ ಇತ್ತು. ಕ್ರಿ.ಶ. 1800ರಲ್ಲಿ ಅದು 100 ಕೋಟಿಯಷ್ಟಿತ್ತು. ಬಳಿಕ ನಾಗರಿಕತೆಯೊಂದಿಗೆ ಕೈಗಾರಿಕೀಕರಣ, ನಗರೀಕರಣ ಬೆಳೆಯಿತು. 
ಅದರೊಂದಿಗೆ ಜನಸಂಖ್ಯೆಯೂ ಹೆಚ್ಚಾಯಿತು. ಇದೀಗ 820 ಕೋಟಿ ತಲುಪಿದೆ. ಶತಮಾನಗಳಿಂದ ನೈಸರ್ಗಿಕ ಸಂಪನ್ಮೂಲ ಅಷ್ಟೇ ಮಿತಿಯಲ್ಲಿದ್ದರೂ, ಜನಸಂಖ್ಯೆ ಮಾತ್ರ ವೃದ್ಧಿಯಾಗುತ್ತಿದ್ದು, ಇದು ನೈಸರ್ಗಿಕ ಸಂಪತ್ತಿನ ಬಳಕೆ ಮೇಲೆ ಅತಿಯಾದ ಒತ್ತಡ ಸೃಷ್ಟಿಯಾಗಿದೆ. ಇದರೊಂದಿಗೆ ವಿವಿಧ ರೀತಿ ಪರಿಸರ ಮಾಲಿನ್ಯವೂ ಉಲ್ಬಣಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು. ಸ್ವಭಾವ, ಮನಸ್ಥಿತಿ ಬದಲಿಸಿಕೊಂಡು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಪ್ರೊ.ಕುಮುದಾ ಮಯೂರ್, ಇಂಜಿನಿಯರ್ ಸಂಸ್ಥೆಯ ಎಂ.ಕೆ.ನಂಜಯ್ಯ, ಅಸೋಸಿಯೇಷನ್‌ನ ಆಸೀಫ್ ಇಕ್ಬಾಲ್ ಖಾಲೀಲ್, ಎ.ಸಿ.ಚಾಮರಾಜೇಗೌಡ, ಪ್ರಾಧ್ಯಾಪಕ ಡಾ.ಸದಾಶಿವಮೂರ್ತಿ ಇತರರಿದ್ದರು.