ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು. ನಗರಸಭೆ ಸದಸ್ಯ ಮಂಜುಳಾ ಪ್ರಕಾಶ್, ಈಶ್ವರ್ ಖನ್ನಾಟಿ, ಡಾ.ಸುವರ್ಣ, ಡಾ.ನಾಗರಾಜು ಇತರರು ಇದ್ದರು.
ನಂಜನಗೂಡು: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಂಗವಾಗಿ ಭಾನುವಾರ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಗರಸಭಾ ಸದಸ್ಯೆ ಮಂಜುಳಾ ಪ್ರಕಾಶ್ ಅವರು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಈಶ್ವರ್ ಕನ್ನಾಟಿ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರ, ಅಂಗನವಾಡಿ, ಬಸ್ ನಿಲ್ದಾಣ, ಶ್ರೀ ಕಂಠೇಶ್ವರ ದೇವಾಲಯ, ರೈಲು ನಿಲ್ದಾಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ 221 ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗಿದೆ. ಅಭಿಯಾನಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 800ಕ್ಕೂ ಅಧಿಕ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗಿದೆ. ತಾಲೂಕಿನ 20,108 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ರೋಗಿಗಳ ನಿಯಂತ್ರಣ ಅಧಿಕಾರಿ ಡಾ ಸುವರ್ಣಾ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಡಾ.ನಾಗರಾಜು, ವನಜಾಕ್ಷಿ, ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಯದು ಗಿರೀಶ್, ಗೌರಮ್ಮ , ಹಿರಿಯ ಆಯುಷ್ಮಾನ್ ವೈದ್ಯಾಧಿಕಾರಿ ಅಶೋಕ್ ಇದ್ದರು.