ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡದೆ ಇರುವುದಿಂದ ಅಪರಾಧ ಕೃತ್ಯಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ತವರು ಜಿಲ್ಲೆಯಲ್ಲಿ ಮೊದಲ ಅವಧಿಯಲ್ಲಿ ಬಿಗಿ ಇತ್ತು. ಆದರೆ ಎರಡನೇ ಅವಧಿಯಲ್ಲಿ ಈ ರೀತಿಯಾದ ಅಪರಾಧ ಘಟನೆಗಳು ಪದೇ ಪದೆ ಮರುಕಳಿಸುತ್ತಿವೆ. ಹುಣಸೂರು ಪ್ರಕರಣದಲ್ಲಿ ಹಾಡಹಗಲೇ ಬಂದು ದರೋಡೆ ನಡೆಸಿದ್ದು, ಪೊಲೀಸರಿಗೆ ಯಾವುದೇ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ಪೊಲೀಸರಿಗೆ ಅವರ ಕರ್ತವ್ಯ ಮಾಡುವುದಕ್ಕೆ ಬಿಟ್ಟರೆ ಇಂತಹ ಪ್ರಕರಣಗಳನ್ನು ಮಟ್ಟ ಹಾಕಲಿದ್ದಾರೆ. ಮೈಸೂರಿನಲ್ಲಿ ನಡೆದ ಬಾಲಕಿಯ ರೇಪ್ ಕೇಸ್‌ನಲ್ಲಿ ಒಂದೇ ಒಂದು ಕ್ಲ್ಯೂ ಮೂಲಕ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ಮಾಡಿ, ಇಲ್ಲಿಯ ಡ್ರಗ್ಸ್ ಜಾಲ ಬೇಧಿಸುತ್ತಾರೆ. ಇದೊಂದು ಯುವ ಸಮುದಾಯವನ್ನು ದಾರಿತಪ್ಪಿಸುವ ಪರೋಕ್ಷ ಸಹಕಾರವನ್ನು ಸರ್ಕಾರ ನೀಡುತ್ತಿದೆಯೇ? ಸರ್ಕಾರದ ನಡೆಯಿಂದಲೇ ಡ್ರಗ್ಸ್ ಜಾಲ ಹೆಚ್ಚಾಗುತ್ತಿದ್ದು, ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಪುಕ್ಕಲು ಸಿಎಂ
ಒಂದು ಆನೆಗೋಸ್ಕರ ಕೇರಳ ಸರ್ಕಾರಕ್ಕೆ ಕರ್ನಾಟಕ ಪರಿಹಾರ ಕೊಡುತ್ತದೆ. ಇನ್ನೂ ಕೇರಳಿಗರಿರುವ ಕೋಗಿಲುವಾಲು ಬಡಾವಣೆಗೆ ಕೇರಳ ಸಿಎಂ ಪರಿಹಾರ ನೀಡಲಿ ಎಂದು ಪಿಣರಾಯಿ ವಿಜಯನ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಪಿಣರಾಯಿ ವಿಜಯನ್ ಪ್ರವೇಶಿಸಿದರೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡಲಿದ್ದು, ಆ ಕಾರಣಕ್ಕಾಗಿ ಕೇರಳ ಸರ್ಕಾರ ಪ್ರವೇಶಿಸಿದೆ ಎಂದು ವಾಗ್ದಾಳಿ ನಡೆಸಿದರು.