ಅಪರಾಧ 
ಮೈಸೂರು

ಪೊಲೀಸರಿಂದ ಕಾರಾಗೃಹ ಕೊಠಡಿಗಳ ಪರಿಶೀಲನೆ

ಅವಿನಾಶ್ ಜೈನಹಳ್ಳಿ
ಮೈಸೂರು: ಮಾದಕ ವಸ್ತುವನ್ನು ಜೀನ್ಸ್ ಪ್ಯಾಂಟ್ ಸೊಂಟದ ಪಟ್ಟಿಯಲ್ಲಿಟ್ಟು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸಾಗಿಸಲೆತ್ನಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಕಾರಾಗೃಹದ ಕೆಲ ಕೊಠಡಿಗಳನ್ನು ಪರಿಶೀಲಿಸಲಾಗಿದೆ.
ಕಾರಾಗೃಹ ಹಾಗೂ ಮಂಡಿ ಠಾಣೆ ಪೊಲೀಸರು ಭಾನುವಾರ ಸಂಜೆ ಜಂಟಿಯಾಗಿ ವಿಚಾರಣಾಧೀನ ಬಂಧಿಗಳ ವಿಭಾಗದ ಕೊಠಡಿ ಸಂಖ್ಯೆ 17 ಹಾಗೂ 21, ಸಜಾ ಕೈದಿಗಳ ವಿಭಾಗದ ಕೊಠಡಿ ಸಂಖ್ಯೆ 16 ಹಾಗೂ ಭದ್ರತಾ ಸೆಲ್ ಕೊಠಡಿ 23ರಲ್ಲಿ ತಲಾಶ್ ನಡೆಸಿದ್ದಾರೆ.
ಈ ವೇಳೆ ಭದ್ರತಾ ಸೆಲ್ ಕೊಠಡಿ 23ರಲ್ಲಿದ್ದ ಆರೋಪಿ ಆಕಾಶ್ ಬಳಿ 500 ರೂ. ಹಾಗೂ ವಿಚಾರಣಾ ಬಂಧಿ ವಿಭಾಗದ ಕೊಠಡಿ ಸಂಖ್ಯೆ 17ರಲ್ಲಿ ಗಾಂಜಾ ಸೇವನೆಗೆ ಬಳಸುವ ಮಣ್ಣಿನ ಚಿಲುಮೆ ಪತ್ತೆಯಾಗಿದ್ದು, ಅವುಗಳನ್ನು ಮಂಡಿ ಠಾಣೆಗೆ ಒಪ್ಪಿಸಲಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೈಲಿನಲ್ಲಿರುವ ಆಕಾಶ್‌ಗೆ ಭೇಟಿಯಾಗಿ ಆತನಿಗೆ ಬಟ್ಟೆ ನೀಡುವ ನೆಪದಲ್ಲಿ ಗಾಂಜಾ ರೀತಿಯ ಮಾದಕ ವಸ್ತುವನ್ನು ಜೈಲಿನೊಳಗೆ ಸಾಗಿಸಲು ಪ್ರಯತ್ನಿಸಿದ್ದ ರೂಪಾ ಹಾಗೂ ಆ ಕೃತ್ಯಕ್ಕೆ ಸೂಚನೆ ನೀಡಿದ್ದ ಸುರೇಶ್‌ನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿತ್ತು.