ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಎಸ್ಪಿಗಳಾದ ಎಲ್.ನಾಗೇಶ್, ಸಿ.ಮಲ್ಲಿಕ್, ಡಿವೈಎಸ್ಪಿಗಳಾದ ಜಿ.ಎಸ್.ರಘು, ರವಿ,ಟಿ.ಬಿ.ರಾಜಣ್ಣ ಇದ್ದರು
ಜಿಲ್ಲಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕಳೆದೆರಡು ತಿಂಗಳಲ್ಲಿ ನಡೆದಿದ್ದ ಅನೇಕ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವ ಮೂಲಕ 29.97 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ತಿಂಗಳಲ್ಲಿ 24 ಅಪರಾಧ ಕೃತ್ಯಗಳು ಜರುಗಿದ್ದು, ಇವುಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ಪೊಲೀಸರು ಅಷ್ಟೂ ಪ್ರಕರಣ ತನಿಖೆ ನಡೆಸಿ 29.97 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, 14 ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಎನ್‌ಡಿಪಿಎಸ್ ಕಾಯಿದೆಯಡಿ 55 ಪ್ರಕರಣ ದಾಖಲಿಸಿಕೊಂಡು 1ಕೆ.ಜಿ. 860 ಗ್ರಾಂ. ತೂಕದ ಗಾಂಜಾ ಮತ್ತು 0.10 ಎಂಎಲ್ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಲಾಟರಿ ಕಾಯಿದೆಯಡಿ 14 ಪ್ರಕರಣ ದಾಖಲಿಸಿಕೊಂಡು 2.26 ಲಕ್ಷ ರೂ.ವೌಲ್ಯದ ಲಾಟರಿ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್‌ಸ್ಪೆಕ್ಟರ್, ಎಸ್‌ಐ ನೇತೃತ್ವದಲ್ಲಿ ಅಪರಾಧ ಪತ್ತೆಗಾಗಿ ನಾಲ್ಕರಿಂದ ಐದು ಸಿಬ್ಬಂದಿಯ ಪ್ರತ್ಯೇಕ ತಂಡ ರಚಿಸಲಾಗಿದ್ದು, ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಪತ್ತೆಗೆ ಈ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಶಪಡಿಸಿಕೊಂಡ ಸ್ವತ್ತುಗಳು: 9 ಪ್ರಕರಣಗಳಲ್ಲಿ 10.46 ಲಕ್ಷ ರೂ. ಮೌಲ್ಯದ 279 ಗ್ರಾಂ. ಚಿನ್ನಾಭರಣ, 5 ಪ್ರಕರಣಗಳಲ್ಲಿ 3.76 ಲಕ್ಷ ರೂ. ನಗದು, 6 ಪ್ರಕರಣಗಳಲ್ಲಿ 14.33 ಲಕ್ಷ ರೂ. ಮೌಲ್ಯದ 8 ವಾಹನ ವಶ ಪಡಿಸಿಕೊಳ್ಳಲಾಗಿದೆ. 3 ಪ್ರಕರಣಗಳಲ್ಲಿ 82 ಸಾವಿರ ರೂ. ಮೌಲ್ಯದ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕ್ ವಸ್ತು ವಶ ಪಡಿಸಿಕೊಂಡಿದ್ದರೆ, 1 ಪ್ರಕರಣದಲ್ಲಿ 58 ಸಾವಿರ ರೂ.ಮೌಲ್ಯದ 2 ಜಾನುವಾರು ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತು ಮುಕ್ತ: ಜಿಲ್ಲೆಯಲ್ಲಿ ಮಾದಕ ವಸ್ತು ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಶೇಷವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 56 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಗಾಂಜಾ ಪತ್ತೆಯಾಗಿರುವುದೇ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಜೈಲಿನಲ್ಲಿದ್ದಾಗಲೇ ಕಳ್ಳತನಕ್ಕೆ ಸ್ಕೆಚ್: ಹುಣಸೂರು ತಾಲೂಕಿನ ಬಿಳಿಕೆರೆ ಬಳಿ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಸುಲಿಗೆ ಪ್ರಕರಣ ಭೇದಿಸಿರುವ ಪೊಲೀಸರು ಪೆಟ್ರೋಲ್ ಸಿಬ್ಬಂದಿ ಬಳಿ 15ಸಾವಿರ ರೂ. ಹಣ ಸುಲಿಗೆ ಮಾಡಿದ್ದ 5 ಜನ ಖದೀಮರನ್ನು ಬಂಧಿಸಿದ್ದಾರೆ. ಆರೋಪಿಗಳ ಜಾಡು ಹಿಡಿದು ಸಾಗಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಖದೀಮರು, ಈ ಮೊದಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳು ಜೈಲಿನಲ್ಲಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್ ಹಾಕಿ, ಹೊರಬಂದ ನಂತರ ಕಳ್ಳತನ ಮಾಡಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ಎಲ್.ನಾಗೇಶ್, ಸಿ.ಮಲ್ಲಿಕ್, ಡಿವೈಎಸ್ಪಿಗಳಾದ ಜಿ.ಎಸ್.ರಘು, ರವಿ,ಟಿ.ಬಿ.ರಾಜಣ್ಣ ಇದ್ದರು.