ಕ್ರಿಯಾ ಮೈಸೂರು ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡನಿಂಗಪ್ಪ ಆಲೂರು, ಡಾ. ಸುಜಾತಾ ಅಕ್ಕಿ, ಟಿ. ಸತೀಶ್ ಜವರೇಗೌಡ, ಪ್ರಸನ್ನಕುಮಾರ್ ಕೆರಗೋಡು, ಮಂದಾರ ಎಸ್. ಉಡುಪಿ ಇದ್ದರು.
- ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಮೆಟ್ಟಿ ನಿಲ್ಲುವ ಕೆಚ್ಚು ಕಾವ್ಯಕ್ಕಿದೆ.
- ಕವಿಮನಸು ಧ್ಯಾನಸ್ಥ ಸ್ಥಿತಿಗೆ ಹೊರಳಿದಾಗ ಕವಿತ್ವ ಆವಿರ್ಭವಿಸುತ್ತದೆ
ಮೈಸೂರು: ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಮೆಟ್ಟಿ ನಿಲ್ಲುವ ಕೆಚ್ಚು ಕಾವ್ಯಕ್ಕಿದೆ. ಈ ಕೆಚ್ಚು ಕಾವ್ಯಕ್ಕೆ ಇರುವುದರಿಂದಲೇ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮಾನವೀಯತೆಯನ್ನು ನೆಲೆಗೊಳಿಸಲು ಸಾಧ್ಯವಾಗಿದೆ ಎಂದು ನಾಟಕಕಾರರಾದ ಡಾ. ಸುಜಾತಾ ಅಕ್ಕಿ ಅಭಿಪ್ರಾಯಪಟ್ಟರು.
ಕ್ರಿಯಾ-ಸಮಾಜದೆಡೆಗೆ ಸಂಸ್ಥೆ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್‌ನಿಂದ ನಗರದ ಬೋಗಾದಿಯ ಕ್ರಿಯಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಯುವ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯ ವಾಚ್ಯವಾಗಬಾರದು. ಅದು ರೂಪಕ, ಪ್ರತಿಮೆ, ಉಪಮೆಯಿಂದ ಕೂಡಿರಬೇಕು. ಇದರಿಂದ ಕಾವ್ಯದ ಸೊಗಸು ಮತ್ತು ಸೊಗಡು ವರ್ಧಿಸುತ್ತದೆ. ಪದ ಕಿರಿದಾದರೂ ಅರ್ಥ ವಿಸ್ತಾರ ಇರಬೇಕು. ಆಗ ಕಾವ್ಯದ ಸೌಂದರ್ಯ ಹೆಚ್ಚಿ ಅರ್ಥಪೂರ್ಣ ಓದಿನ ಆಸ್ವಾದನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಕವಿ ಮನಸ್ಸಿರುತ್ತದೆ. ಈ ಕವಿಮನಸು ಧ್ಯಾನಸ್ಥ ಸ್ಥಿತಿಗೆ ಹೊರಳಿದಾಗ ಕವಿತ್ವ ಆವಿರ್ಭವಿಸುತ್ತದೆ. ಭಾವನೆ ಮತ್ತು ಕಲ್ಪನೆ ಜತೆಗೆ ಸ್ವಾನುಭವವೂ ಸಾಮಾಜಿಕ ಅನುಭವವೂ ಒಂದಾಗಿ ಅರ್ಥಪೂರ್ಣ ಕಾವ್ಯ ಸೃಷ್ಟಿಯಾಗುತ್ತದೆ. ಅಂಥ ಕಾವ್ಯ ಓದಿದ ಸಹೃದಯನಿಗೆ ಕಾವ್ಯದಲ್ಲಿರುವುದು ತನ್ನದೆ ಅನುಭವ ಅನಿಸುತ್ತದೆ ಎಂದರು.
ಯುವ ಕವಿಗೋಷ್ಠಿ ಉದ್ಘಾಟಿಸಿದ ಕಾದಂಬರಿಕಾರ ದೊಡ್ಡನಿಂಗಪ್ಪ ಆಲೂರು ಮಾತನಾಡಿ, ಜೀವನದ ಅನುಭವವನ್ನು ಕಾವ್ಯವಾಗಿಸಲು ಕವಿಗೆ ಪ್ರತಿಭೆ ಜತೆಗೆ ಒಳಮನಸು, ಸೂಕ್ಷ್ಮವಾದ ಗ್ರಹಿಕೆ, ಸಂಯಮ, ವಿಸ್ತಾರವಾದ ಓದಿನ ಅಗತ್ಯವಿದೆ ಎಂದು ಹೇಳಿದರು.
ಕವಿತೆಯನ್ನು ಗೋಷ್ಠಿಗಾಗಿ, ವಿಮರ್ಶಕರಿಗಾಗಿ, ಪ್ರಶಸ್ತಿಗಾಗಿ, ಹೆಸರು ಗಳಿಸುವುದಕ್ಕಾಗಿ ಬರೆಯಬಾರದು. ಅದನ್ನು ಮನುಷ್ಯತ್ವದ ನೆಲೆಯಿಂದ ಬರೆಯಬೇಕು. ಬದುಕನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಆಗ ಕಾವ್ಯ ಜೀವದ ಉಸಿರಾಗಿ ಬರುತ್ತದೆ. ಕಾವ್ಯ ನನಗೆ ಬದುಕು, ಅನ್ನ, ಅಸ್ತಿತ್ವ, ಮನುಷ್ಯತ್ವ ಕೊಟ್ಟಿದೆ ಎಂದು ಭಾವುಕರಾಗಿ ನುಡಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿದರರು. ಕ್ರಿಯಾ-ಸಮಾಜದೆಡೆಗೆ ಸಂಸ್ಥೆ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು, ಪ್ರಧಾನ ಸಂಚಾಲಕ ಮಂದಾರ ಎಸ್. ಉಡುಪಿ, ಸಂಚಾಲಕರಾದ ಬಿ. ಕುಮಾರ್, ಕೆ. ಲೋಕೇಶ್, ನಂದಿನಿ, ಸ್ಪಂದನ ಸಾಂಸ್ಕೃತಿಕ ಪರಿಷತ್‌ನ ಪದಾಧಿಕಾರಿಗಳಾದ ಚಂದ್ರು ಮಂಡ್ಯ, ಡಾ.ಬಿ. ಬಸವರಾಜು, ರವೀಂದ್ರ ಕುಮಾರ್ ಇತರರು ಇದ್ದರು.