ಮೈಸೂರು ಸಖಿ ಫೌಂಡೇಷನ್ ಮತ್ತು ಸೂರ್ಯಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್, ಡಾ.ವಿ.ರಂಗನಾಥ, ವಿಕ್ರಂ ಅಯ್ಯಂಗಾರ್, ಗಾಯತ್ರಿ ಸುಂದರೇಶ್ ಇತರರು ಇದ್ದರು.
- ಮಹಿಳೆಯರಿಂದ ಸಸಿಗಳನ್ನು ನೆಟ್ಟು ಪೋಷಿಸಿಸುವ ಮೂಲಕ ಪ್ರಕೃತಿಗೆ ಅಪಾರ ಕೊಡುಗೆ
- ಕೆಲಸ ಮಾಡುವವರಿಗೆ ಸಹಕರಿಸದಿದ್ದರೂ ಸುಮ್ಮನಿದ್ದರಷ್ಟೇ ಸಾಕು
ಮೈಸೂರು: ಗೃಹಿಣಿಯರು ತಮ್ಮ ಮನೆಯಂಗಳದಲ್ಲಿಯೇ ಸಸಿಗಳನ್ನು ನೆಟ್ಟು ಪೋಷಿಸಿದರೂ ಪ್ರಕೃತಿಗೆ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ಪರಿಸರ ಪ್ರೇಮಿ ರಮೇಶ್ ತಿಳಿಸಿದರು.
ನಗರದ ಸಖಿ ಫೌಂಡೇಷನ್ ಮತ್ತು ಸೂರ್ಯಚಾರಿಟಬಲ್ ಟ್ರಸ್ಟ್‌ನಿಂದ ರಾಮಕೃಷ್ಣನಗರದ ಕಚೇರಿಯಲ್ಲಿ ಆಯೋಜಿಸಿದ್ದ ಸಖಿ ಸಸಿ ಪರಿಸರ ದೀವಿಗೆ ಕಾರ್ಯಕ್ರಮದ ಹನ್ನೆರಡನೆಯ ಸಂಚಿಕೆ ವೃಕ್ಷಮಾತೆ ತಿಮ್ಮಕ್ಕನಿಗೆ ಹಸಿರಕ್ಷರದ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಕೆಲಸ ಕಾರ್ಯಗಳನ್ನು ಅದರಲ್ಲಿಯೂ ಪರಿಸರ ಆಂದೋಲನ, ಪರಿಸರ ಸಂರಕ್ಷಣೆ ಕೆಲಸ, ಕಾರ್ಯಗಳನ್ನು ಮಾಡುವವರನ್ನು ಅಪಶಕುನದ ಬೆಕ್ಕಿನಂತೆ ಕೆಲವರು ಕಾಣುತ್ತಾರೆ. ಕೆಲಸ ಮಾಡುವವರಿಗೆ ಸಹಕರಿಸದಿದ್ದರೂ ಸುಮ್ಮನಿದ್ದರಷ್ಟೇ ಸಾಕು ಎಂದು ಸಲಹೆ ನೀಡಿದರು.
ಬದುಕಿದ್ದಾಗ ಭರವಸೆ ಬದುಕು ನೀಡದೆ ಸತ್ತನಂತರ ಸಾವಿರದಷ್ಟು ಸಂತಾಪದ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಕರಿಘಟ್ಟದಲ್ಲಿ ಹಸಿರು ಕ್ರಾಂತಿ ಮಾಡುವಾಗ ಸಾಕಷ್ಟು ಕಷ್ಟನಷ್ಟಗಳು ನಿಷ್ಠೂರಗಳನ್ನು ಅನುಭವಿಸಬೇಕಾಯಿತು. ಈಗ ಅದೇ ಜನ ಬೆಳೆದುನಿಂತ ಮರಗಳ ಆಶ್ರಯದಲ್ಲಿ ನೆರಳು ಪಡೆಯುವಾಗ ಸಂತಸವಾಗುತ್ತದೆ ಎಂದು ಹೇಳಿದರು.
ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ ಮಾತನಾಡಿ, ನೀರನ್ನು ಮಿತವ್ಯಯವಾಗಿ ಬಳಸಿ, ಶೌಚ ಕಾರ್ಯಕ್ಕೆ ಬಕೆಟುಗಟ್ಟಲೆ ನೀರನ್ನು ಪೋಲು ಮಾಡುವುದು ತರವಲ್ಲ ಎಂದರು
ಸಸಿಗಳನ್ನು ನೆಡುವುದು ದೊಡ್ಡದಲ್ಲ. ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವುದೂ ಮುಖ್ಯ. ಆದ್ದರಿಂದ ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯೂ ನಮ್ಮದೆ ಎಂದು ಹೇಳಿದರು.
ವಾಣಿ ಸುಬ್ಬಯ್ಯ, ವಿಜಯಲಕ್ಷ್ಮೀ, ರೂಪಶ್ರೀ ಹೇಮಂತ್, ಹೇಮಮಾಲಾ ಅವರು ಪರಿಸರ ಸಂರಕ್ಷಣೆ ಹಾಗೂ ನಿಸರ್ಗದ ವಿಸ್ಮಯಗಳ ಕುರಿತು ಮಾತನಾಡಿದರು. ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಸಂಘಟನೆಯ ಗಾಯತ್ರಿ ಸುಂದರೇಶ್ ಇತರರು ಇದ್ದರು.
ಪನ್ನಗ ಮತ್ತು ತಂಡದವರು ಸಮೂಹಗೀತೆಯನ್ನು ಹಾಡಿ ತಿಮ್ಮಕ್ಕನಿಗೆ ಹಸಿರಕ್ಷರದ ನಮನ ಸಲ್ಲಿಸಿದರು. ಸಖಿ ಬಳಗದ ಸದಸ್ಯರಾದ ಪ್ರೊ.ಶಶಿಕಲಾ, ಸುಮಾ ಸೋಮಶೇಖರ್, ಕವಿತಾ ಶಿರೂರ್, ಪ್ರೇಮಾ ಮಹೇಶ್, ವಿಮಲಾ ಪ್ರಕಾಶ್, ಚೈತ್ರಾ, ಉಮಾ ಬಿ.ರಾವ್,ಪುಷ್ಪಲತಾ, ಸುಧಾ ರಮೇಶ್ ಪರಿಸರ ಗೀತೆಗಳನ್ನು ಹಾಡಿದರು. ಜಾಹ್ನವಿ ಶ್ರೀನಿವಾಸ್ ಮತ್ತು ಸರೋಜಾ ಗಣೇಶ್ ಲಾವಣಿ ಹಾಡಿದರು.