ಪಿರಿಯಾಪಟ್ಟಣ ತಾಲೂಕಿನ ಹಿಟ್ಟನೇಹೆಬ್ಬಾಗಿಲು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕ ಉದ್ಘಾಟನೆ ಮಾಡಲಾಯಿತು. ಮಂಜುನಾಥ್.ಆರ್.ಗೌಡ, ಸ್ವಾಮಿಗೌಡ, ಸುವರ್ಣಮ್ಮ, ಕಾವೇರಮ್ಮ ಇತರರು ಇದ್ದಾರೆ.
- ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಂಜುನಾಥ್ ಆರ್.ಗೌಡ ಆನಂದಗೆರೆ ಹೇಳಿದರು
- ಹಸಿರು ಸೇನೆಯ ಮಹಿಳಾ ಘಟಕ ಉದ್ಘಾಟನೆ ಹಾಗೂ ಹಸಿರು ಶಾಲು ದೀಕ್ಷೆ ಕಾರ್ಯಕ್ರಮ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನಲ್ಲಿ ನಮ್ಮ ರೈತ ಸಂಘ ಮತ್ತು ಹಸಿರು ಸೇನೆ ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಂಜುನಾಥ್ ಆರ್.ಗೌಡ ಆನಂದಗೆರೆ ಹೇಳಿದರು.
ತಾಲೂಕಿನ ಹಿಟ್ಟನೇಹೆಬ್ಬಾಗಿಲು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕ ಉದ್ಘಾಟನೆ ಹಾಗೂ ಹಸಿರು ಶಾಲು ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಮೇಲಿನ ಶೋಷಣೆ ಹಾಗೂ ಅವರ ಸುರಕ್ಷತೆ ಹಿತದೃಷ್ಟಿಯಿಂದ ನಮ್ಮ ಸಂಘಟನೆಯು ನಿತ್ಯ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಇದೀಗ ರೈತ ಮಹಿಳೆಯರು ಸಂಘಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತಷ್ಟು ಬಲಿಷ್ಠ ಶಕ್ತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಗ್ರಾಮ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ ಮಾತನಾಡಿ, ಒಂದು ಮನೆಯ ಸಂಸಾರದಿಂದ ಇಡೀ ದೇಶವೇ ಬದಲಾವಣೆಯಾಗಲು ಮಹಿಳೆಯರಿಂದ ಮಾತ್ರ ಸಾಧ್ಯ. ನಮ್ಮ ಸಂಘಟನೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುವುದರ ಜತೆಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು. ದುಡಿಯುವ ಯುವ ಸಮೂಹ ಕುಡಿತಕ್ಕೆ ಬಲಿಯಾಗುತ್ತಿದ್ದು, ಇದನ್ನು ಸರಿದೂಗಿಸಲು ಮಹಿಳೆಯರಿಂದ ಹೆಚ್ಚು ಸಾಧ್ಯವಿದೆ ಎಂದರು.
ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ದಾವಣಗೆರೆ ಸುವರ್ಣಮ್ಮ ಮಾತನಾಡಿ, ರಾಜ್ಯದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ದಲ್ಲಾಳಿಗಳು, ಕಂಪನಿಗಳ ಮಾಲೀಕರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಆದರೆ ರೈತರು ಮಾತ್ರ ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ರಾಜಕಾರಣಿಗಳು ರೈತರನ್ನು ಕೇವಲ ಮತ ಹಾಕುವ ಯಂತ್ರಗಳಂತೆ ನೋಡುತ್ತಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತಿಸಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದರು.
ಹಿಟ್ಟನೇಹೆಬ್ಬಾಗಿಲು ಗ್ರಾಮದಲ್ಲಿ ಮಹಿಳಾ ಘಟಕದ ನಾಮಫಲಕವನ್ನು ಸ್ಥಾಪನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಹಸಿರು ಶಾಲು ಹಾಕಿಸಿಕೊಳ್ಳುವ ಮೂಲಕ ಸಂಘಟನೆಗೆ ಸೇರ್ಪಡೆಯಾದರು.
ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮಣಿ, ರಾಜ್ಯ ಸದಸ್ಯರಾದ ದೇವಶೆಟ್ಟಿ, ಹನಗೋಡು ಪ್ರಕಾಶ್, ಬಿ.ಆರ್.ಸುರೇಶ, ವಿಜಯ್ ರಾಜೇ ಅರಸು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಕಾವೇರಮ್ಮ, ಪ್ರಧಾನ ಕಾರ್ಯದರ್ಶಿ ಲೀಲಾವತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಸೀಗೂರು ಗ್ರಾಮ ಘಟಕ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಯೋಗೇಶ್ ಬೆಟ್ಟದಪುರ, ಮಹಾದೇವ ಆನಂದಗೆರೆ, ಶೇಕ್ ಈಬಾದ್, ಹೋಬಳಿ ಅಧ್ಯಕ್ಷ ಇರ್ಫಾನ್, ಗ್ರಾ.ಪಂ ಸದಸ್ಯ ಕಾಮರಾಜು, ಸುರೇಶ್ ಸೇರಿದಂತೆ ಹಲವರು ಇದ್ದರು.