ಸರಗೂರು ತಾಲೂಕಿನ ಚಿಕ್ಕ ದೇವಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿರುವ ಚಿಕ್ಕದೇವಮ್ಮ ತಾಯಿ ಹೊಸ ವರ್ಷದ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಬೆಳಗ್ಗೆ ಧನುರ್ಮಾಸ ಪೂಜೆ ನಡೆದ ಬಳಿಕ ದೇವತೆಗೆ ವಿಶೇಷ ಅಭಿಷೇಕ ಮಾಡಲಾಯಿತು. ದೇವತೆಯನ್ನು ವಿವಿಧ ಹೂವುಗಳಿಂದ ಮದುವಣಗಿತ್ತಿಯಂತೆ ಅಲಂಕೃತಗೊಳಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವತೆ ದರ್ಶನ ಪಡೆದು ಪುನೀತರಾದರು.
ದೇವಸ್ಥಾನದ ಪಾದದ ಬಳಿಯಲ್ಲಿ ದೇವತೆಗೆ ಮೊದಲಿಗೆ ಪೂಜೆ ಸಲ್ಲಿಸಿದ ಭಕ್ತರು ಮೆಟ್ಟಿಲುಗಳನ್ನು ಏರಿ ದೇವತೆಯ ಬಳಿ ಬಂದು, ಚಿಕ್ಕಮ್ಮ ಚಿಕ್ಕದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವತೆಯನ್ನು ಕಣ್ತುಂಬಿಕೊಂಡರು. ಹೊಸ ವರುಷ ದಿನದಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಇಷ್ಟಾರ್ಥ ಹರಕೆ ತೀರಿಸಿ ದೇವರ ಕೃಪೆಗೆ ಪಾತ್ರರಾದರು.
ವರ್ಷದಿಂದ ವರ್ಷಕ್ಕೆ ಜನದಟ್ಟಣೆ ಜೋರಾಗಿರುತ್ತದೆ. ಕಳೆದ ಸಾಲಿನಲ್ಲಿ ಇಷ್ಟು ಜನಸಂದಣಿ ಇರಲಿಲ್ಲ. ದೇವತೆಗೆ ಮಂಗಳವಾರ, ಶುಕ್ರವಾರ, ಭಾನುವಾರ ವಿಶೇಷ ಪೂಜೆ ಇರಲಿದೆ. ಇಂದು ಬುಧವಾರವೂ ದೇವತೆಯ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ ಎನ್ನುತ್ತಾರೆ ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ.
ಹೊಸ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸ್ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೂ ಟ್ರಾಫಿಕ್ ಜಾಮ್‌ನಿಂದಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ದೇವಸ್ಥಾನದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ಅರ್ಚಕರಾದ ಮನು, ಪ್ರಸನ್ನ, ಮಣಿ, ಸಂತೋಷ್, ಶಿವಕುಮಾರ್, ಲಿಂಗಪ್ಪ ಸೇರಿದಂತೆ ಸಿಬ್ಬಂದಿ ಇದ್ದರು.