ಪೈ.ಬಾಪು ಸಾಹೇಬ್ ಸಿಂದೆಗೆ ‘ದಸರಾ ಕಂಠೀರವ’ ಪಟ್ಟ 
ಮೈಸೂರು

ಪೈ.ಬಾಪು ಸಾಹೇಬ್ ಸಿಂದೆಗೆ ‘ದಸರಾ ಕಂಠೀರವ’ ಪಟ್ಟ

ಅವಿನಾಶ್ ಜೈನಹಳ್ಳಿ ಮೈಸೂರು

ದಸರಾ ಸಂಭ್ರಮದಲ್ಲಿ ಝಗಮಗಿಸುತ್ತಿರುವ ಅರಮನೆ ನಗರಿ ಮೈಸೂರಿನ ಕುಸ್ತಿ ಅಖಾಡದಲ್ಲಿ ವಿಜಯ ಸಾಧಿಸಿದ ಮುದೋಳದ ಪೈ.ಬಾಪು ಸಾಹೇಬ್ ಶಿಂಧೆ ‘ದಸರಾ ಕಂಠೀರವ’ನಾಗಿ, ಅಂತಾರಾಷ್ಟ್ರೀಯ ಕುಸ್ತಿ ಮೈಸೂರಿನ ಪೈ.ಹನುಮಂತ ‘ದಸರಾ ಕೇಸರಿ’ಯಾಗಿ ಹಾಗೂ ಮೈಸೂರಿನ ಪೈ.ಸಿ.ಸುನೀಲ್ ‘ದಸರಾ ಕಿಶೋರ’ನಾಗಿ ವಿಜೃಂಭಿಸಿದರು. ಜತೆಗೆ ಉತ್ತರ ಕನ್ನಡದ ಶಾಲಿನಾ ಸಿದ್ಧಿ ‘ದಸರಾ ಕಿಶೋರಿ’ಯಾಗಿ, ‘ದಸರಾ ಕಿಶೋರ ರತ್ನ’ನಾಗಿ ದಾವಣಗೆರೆಯ ಸಂಜೀವ್ ಕೊರವರ ಪರಾಕ್ರಮ ಮೆರೆದರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದಸರಾ ಕುಸ್ತಿ ಪಂದ್ಯಾವಳಿಯ ವಿವಿಧ ಟೈಟಲ್‌ನ ಅಂತಿಮ ಕುಸ್ತಿ ರಣ ರೋಚಕವಾಗಿತ್ತು. ಪೈಲ್ವಾನರ ತೋಳ್ಬಲ, ತಂತ್ರಗಾರಿಕೆ ಹಾಗೂ ಛಲದ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು. ನೆಚ್ಚಿನ ಪೈಲ್ವಾನರ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದ ಕುಸ್ತಿ ಅಭಿಮಾನಿಗಳು, ಪ್ರತಿ ಹಿಡಿತ, ಪ್ರತಿದಾಳಿ ಹಾಗೂ ನಿರ್ಣಾಯಕ ಅಂಕಗಳಿಗೂ ಹರ್ಷೋದ್ಗಾರ ಮೊಳಗಿಸಿದರು.

ಕಂಠೀರವನಾಗಿ ವಿಜೃಂಭಿಸಿದ ಪೈ.ಬಾಪು ಸಾಹೇಬ್ ಶಿಂಧೆ:

‘ದಸರಾ ಕಂಠೀರವ’ ಪ್ರಶಸ್ತಿಗಾಗಿ ನಡೆದ ಕುಸ್ತಿ ಪಂದ್ಯದಲ್ಲಿ ಮುದೋಳದ ಪೈ.ಬಾಪು ಸಾಹೇಬ್ ಶಿಂಧೆ ಅವರು ಯಳ್ಳಟ್ಟಿಯ ಪೈ.ಬಸವರಾಜ್ ವಿರುದ್ಧ ಜಯ ಸಾಧಿಸಿದರು. 20 ನಿಮಿಷಗಳ ನಿಗದಿತ ಅವಧಿಯ ಈ ಪಂದ್ಯದಲ್ಲಿ ಬಾಪು ಸಾಹೇಬ್ ಶಿಂಧೆ ಅವರು 11ನೇ ನಿಮಿಷದಲ್ಲಿ ಎರಡು ಅಂಕ ಗಳಿಸಿ ಮುನ್ನಡೆ ಪಡೆದರು. ಬಳಿಕ 14ನೇ ನಿಮಿಷದಲ್ಲಿ ಮತ್ತೆರಡು ಅಂಕ ಗಳಿಸುವ ಮೂಲಕ 4-0 ಅಂಕಗಳ ಮುನ್ನಡೆಯೊಂದಿಗೆ ಜಯ ಸಾಧಿಸಿದರು. ಬಾಪು ಸಾಹೇಬ್ ಶಿಂಧೆ ಅವರು 2024ನೇ ಸಾಲಿನ ದಸರಾ ಕಂಠೀರವ ಕುಸ್ತಿ ಅಂತಿಮ ಪಂದ್ಯದಲ್ಲಿ ರನ್ನರ್ ಅಪ್ ಆಗಿದ್ದರು.

ಕೊನೆಯ 20 ಸೆಕೆಂಡ್ ಗೆಲುವಿನ ಸಂಭ್ರಮ:

‘ದಸರಾ ಕಿಶೋರ’ ಪ್ರಶಸ್ತಿಗಾಗಿ ಮೈಸೂರಿನ ಪೈ. ಸಿ.ಸುನಿಲ್ ಮತ್ತು ಬಾಗಲಕೋಟೆಯ ಪೈ.ಮುತ್ತು ಬಸಪ್ಪ ನಡುವೆ ನಡೆದ ಕುಸ್ತಿ ಕೊನೆಯ ಕ್ಷಣದವರೆಗೂ ಕುತೂಹಲ ಮೂಡಿಸಿತು. 20 ನಿಮಿಷಗಳ ನಿಗದಿತ ಅವಧಿಯಲ್ಲಿ ಬಹುತೇಕ ಕೊನೆಯ ಕ್ಷಣದವರೆಗೂ ಇಬ್ಬರೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿಯಲು ಕೇವಲ 20 ಸೆಕೆಂಡ್ ಬಾಕಿ ಇರುವಾಗ ಸುನಿಲ್ ಎರಡು ಅಂಕ ಗಳಿಸುವ ಮೂಲಕ ಮುನ್ನಡೆ ಸಾಧಿಸಿದರು. ಅಂತಿಮವಾಗಿ 2-0 ಅಂಕಗಳ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

‘ಕೇಸರಿ’ಯಾಗಿ ಮೆರೆದ ಹನುಮಂತ:

‘ದಸರಾ ಕೇಸರಿ’ ಪ್ರಶಸ್ತಿ ಕುಸ್ತಿ ಪಂದ್ಯದಲ್ಲಿ ಮೈಸೂರಿನ ಅಂತಾರಾಷ್ಟ್ರೀಯ ಕುಸ್ತಿಪಟು ಪೈ.ಹನುಮಂತ್ ಅವರು ಬೆಳಗಾವಿಯ ಪೈ.ಬಿ.ಪರಮಾನಂದ ವಿರುದ್ಧ ಜಯ ಸಾಧಿಸಿದರು. 30 ನಿಮಿಷಗಳ ನಿಗದಿತ ಅವಧಿಯ ಪಂದ್ಯದಲ್ಲಿ ಇಬ್ಬರೂ ಪೈಲ್ವಾನರು ಅಂಕ ಗಳಿಸುವಲ್ಲಿ ವಿಫಲರಾದರು. ಹೀಗಾಗಿ ಫಲಿತಾಂಶ ನಿರ್ಧರಿಸಲು ಐದು ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಈ ಅವಧಿಯಲ್ಲಿ ಮೊದಲು ಸೊಂಟದ ಹಿಡಿತ ಸಾಧಿಸಿದವರಿಗೆ ಅಂಕ ನೀಡುವ ನಿಯಮ ಪ್ರಕಟಿಸಲಾಗಿತ್ತು. ಹೆಚ್ಚುವರಿ ಅವಧಿಯ ಮೂರನೇ ನಿಮಿಷದಲ್ಲಿ ಹನುಮಂತ್ ಅವರು ಎರಡು ಅಂಕಗಳನ್ನು ಗಳಿಸುವ ಮೂಲಕ 2-0 ಅಂತರದ ಮುನ್ನಡೆ ಪಡೆದರು. ಈ ಮೂಲಕ ದಸರಾ ಕೇಸರಿ ಪ್ರಶಸ್ತಿಯ ಕುಸ್ತಿಯಲ್ಲಿ ಗೆಲುವು ದಾಖಲಿಸಿದರು.

8-0 ಅಂತರದಲ್ಲಿ ಸಂಜೀವ್ ಕೊರವರ ಜಯ

‘ದಸರಾ ಕಿಶೋರ ರತ್ನ’ ಪ್ರಶಸ್ತಿಗಾಗಿ ನಡೆದ ಅಂತಿಮ ಕುಸ್ತಿಯಲ್ಲಿ ದಾವಣಗೆರೆಯ ಪೈ.ಸಂಜೀವ್ ಕೊರವರ ಅವರು ಪೈ.ಅರ್ಜುನ್ ಕೊರವರ ವಿರುದ್ಧ ಭರ್ಜರಿ ಜಯ ಸಾಧಿಸಿದರು. 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೈ.ಸಂಜೀವ್ ಕೊರವರ ಅವರು ಪ್ರಾಬಲ್ಯ ಮೆರೆದರು. ಎದುರಾಳಿ ಪೈ.ಅರ್ಜುನ್ ಕೊರವರ ಯಾವುದೇ ಅಂಕ ಗಳಿಸಲು ಅವಕಾಶ ನೀಡದೆ, ಎಂಟು ಅಂಕಗಳನ್ನು ತಮ್ಮದಾಗಿಸಿಕೊಂಡರು. ಅಂತಿಮವಾಗಿ 8-0 ಅಂತರದಲ್ಲಿ ಗೆಲುವು ಸಾಧಿಸಿದರು. ಪೈ.ಸಂಜೀವ್ ಕೊರವರ ಅವರು ಸತತ ಎರಡು ಬಾರಿ ದಸರಾ ಕಿಶೋರ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದು, ಈ ಬಾರಿಯೂ ಕುಸ್ತಿ ಕೌಶಲ ಪ್ರದರ್ಶಿಸಿದರು.

ರೋಚಕ ಕಾಳಗದಲ್ಲಿ ಶಾಲಿನಾ ಸಿದ್ಧಿಗೆ ಜಯ:

‘ದಸರಾ ಕಿಶೋರಿ’ ವಿಭಾಗದ ಕುಸ್ತಿ ಪಂದ್ಯ ಪ್ರೇಕ್ಷಕರನ್ನು ರೋಚಕತೆಯ ಉತ್ತುಂಗಕ್ಕೇರಿಸಿತು. ಬೆಳಗಾವಿಯ ಪೈ.ಸ್ವಾತಿ ಪಾಟೀಲ್ ಮತ್ತು ಉತ್ತರ ಕನ್ನಡದ ಪೈ.ಶಾಲಿನಾ ಸಿದ್ಧಿ ನಡುವಿನ ಈ ಸೆಣಸಾಟ ಬರೋಬ್ಬರಿ 48 ನಿಮಿಷಗಳ ಕಾಲ ನಡೆಯಿತು. ನಿಗದಿತ 30 ನಿಮಿಷಗಳ ಅವಧಿಯಲ್ಲಿ ಇಬ್ಬರೂ ಪೈಲ್ವಾನರು ಅಂಕ ಗಳಿಸಲು ವಿಫಲರಾದರು. ಆರಂಭದಿಂದ ಕೊನೆಯವರೆಗೂ ಇಬ್ಬರೂ ಸಮಬಲದ ಪೈಪೋಟಿ ನೀಡಿದರು. ನಿಗದಿತ ಸಮಯ ಮುಗಿದರೂ ಫಲಿತಾಂಶ ಹೊರಬೀಳದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಹೆಚ್ಚುವರಿ ಸಮಯ ನೀಡಲಾಯಿತು. ಐದು ನಿಮಿಷಗಳ ಹೆಚ್ಚುವರಿ ಅವಧಿಯಲ್ಲೂ ಇಬ್ಬರೂ ಅಂಕ ಗಳಿಸಲಿಲ್ಲ. ಬಳಿಕ ಮತ್ತೆ ಐದು, ಮೂರು, ಮೂರು, ಎರಡು ಹಾಗೂ ಎರಡು ನಿಮಿಷಗಳ ಹೆಚ್ಚುವರಿ ಅವಧಿಗಳನ್ನು ನೀಡಲಾಯಿತು. ಆದರೂ ಫಲಿತಾಂಶ ನಿರ್ಧಾರವಾಗಿರಲಿಲ್ಲ. ಕೊನೆಯ ಹೆಚ್ಚುವರಿ ಅವಧಿಯಲ್ಲಿ ಪೈ.ಶಾಲಿನಾ ಸಿದ್ದಿ ಒಂದು ಅಂಕ ಗಳಿಸುವ ಮೂಲಕ ಜಯದ ನಗೆ ಬೀರಿದರು. ಹೀಗೆ ಒಟ್ಟು 48 ನಿಮಿಷಗಳ ಕಾಲ ನಡೆದ ಈ ಕುಸ್ತಿ, ದಸರಾ ಕುಸ್ತಿ ಇತಿಹಾಸದಲ್ಲಿ ಅತಿ ಹೆಚ್ಚು ಹೆಚ್ಚುವರಿ ಸಮಯ ಪಡೆದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.