ಮರೂರು ಗ್ರಾಮದಲ್ಲಿ ರೇಷ್ಮೆ ಬೆಳಗಾರರ ದ್ವಿತಳಿ ರೇಷ್ಮೆ ಗೂಡಿನ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಎಚ್.ಸಿ.ನಂಜುಂಡಸ್ವಾಮಿ ಉದ್ಘಾಟಿಸಿದರು. ಎಚ್.ಸಿ.ನಾಗೇಂದ್ರಪ್ಪ, ಕೆ.ಬಿ.ಚಂದ್ರಶೇಖರ್, ಮಾದೇಶ್, ಎಂ.ಎಸ್. ಶಿವಣ್ಣ, ಗೀತಾ, ಅಕ್ಕಯ್ಯಮ್ಮ ಇದ್ದರು.
- ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ನಂಜುಂಡಸ್ವಾಮಿ ಭರವಸೆ
ಬೈಲುಕುಪ್ಪೆ : ರೇಷ್ಮೆ ಬೆಳೆಯುವ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಧನವನ್ನು ರೇಷ್ಮೆ ಮಂಡಳಿ ವತಿಯಿಂದ ಹಂತ ಹಂತವಾಗಿ ರೈತರಿಗೆ ಪೂರೈಸಲಾಗುವುದು ಎಂದು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ನಂಜುಂಡಸ್ವಾಮಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ರೇಷ್ಮೆ ಬೆಳೆಗಾರ ಎಂ.ಎಸ್.ಶಿವಣ್ಣ ಅವರ ಜಮೀನಿನ ರೇಷ್ಮೆ ಸಾಕಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ದ್ವಿತಳಿ ರೇಷ್ಮೆ ಗೂಡಿನ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೇಷ್ಮೆ ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದೆ. ಒಂದು ಎಕರೆ ಜಮೀನಿನಲ್ಲಿ ಹೆಚ್ಚು ಖರ್ಚು ಇಲ್ಲದೆ ವರ್ಷಕ್ಕೆ ಮೂರು ಬೆಳೆ ತೆಗೆದು ಹೆಚ್ಚು ಲಾಭ ಗಳಿಸಿಕೊಳ್ಳಬಹುದು. ಇಂತಹ ಹಲವಾರು ಸೌಲಭ್ಯಗಳನ್ನು ಸರ್ಕಾರಗಳು ಜಾರಿಗೆ ತಂದಿದ್ದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸಿರುವ ರೇಷ್ಮೆ ಬೆಳಗಾರರಿಗೆ ಬೆಳೆ ಹಾಗೂ ರೇಷ್ಮೆ ಗೂಡು ನಿರ್ವಹಣೆ ಮಾಡಿ ಲಾಭದ ಕಡೆ ಕೊಂಡೊಯ್ಯುವ ವಿಧಾನದ ಬಗ್ಗೆ ಅರಿವು ಮೂಡಿಸಲಾಯಿತು. ಸಭೆಗೆ ಆಗಮಿಸಿದ ಅಧಿಕಾರಿಗಳಿಗೆ ರೇಷ್ಮೆ ಬೆಳೆಗಾರರಿಗೆ ಸರ್ಕಾರದ ವತಿಯಿಂದ ಮಾಸ್ಕ್ ಕೊಡಿಸಿಕೊಡುವಂತೆ ಮನವಿ ಮಾಡಿದರು. 30 ವರ್ಷಗಳಿಂದ ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡು ರೇಷ್ಮೆ ಬೆಳೆದು ಹೆಚ್ಚು ಲಾಭಗಳಿಸಿದ ಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮರೂರು ಎಂ. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಸಿ.ಗೀತಾ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ತಾಂತ್ರಿಕ ರೇಷ್ಮೆ ಉಪ ನಿರ್ದೇಶಕ ಎಚ್.ಸಿ. ನಾಗೇಂದ್ರಪ್ಪ, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಕೆ.ಬಿ. ಚಂದ್ರಶೇಖರ್, ಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಕ್ಕಯ್ಯಮ್ಮ, ಪಿರಿಯಾಪಟ್ಟಣದ ರೇಷ್ಮೆ ಸಹಾಯಕ ನಿರ್ದೇಶಕ ಮಾದೇಶ್, ಗ್ರಾಪಂ ಸದಸ್ಯರಾದ ಸಯ್ಯದ್ ಸಲೀಂ, ಸಂಶುದ್ದೀನ್, ಶೀಲಾ, ರೇಷ್ಮೆ ವಿಸ್ತರಣಾಧಿಕಾರಿ ಜೆ.ಚಂದ್ರಗೌಡ, ಕೊಪ್ಪ, ರೇಷ್ಮೆ ವಲಯ ಅಧಿಕಾರಿ ಉಮೇಶ್ ಹಾಗೂ ಸಿಬ್ಬಂದಿ, ರೇಷ್ಮೆ ಬೆಳೆಗಾರರಾದ ದಿನೇಶ್, ರಾಜಣ್ಣ, ಶಶಿಧರ, ಮಂಜುನಾಥ್, ಎಚ್.ಆರ್. ಪಾಪಣ್ಣ ಸೇರಿದಂತೆ ಇತರರು ಇದ್ದರು.