ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಅತ್ತಹಳ್ಳಿ ದೇವರಾಜ್, ಅಂಬಳೆ ಮಂಜುನಾಥ್, ಬನ್ನೂರು ಸೂರಿ ಇನ್ನಿತರರಿದ್ದರು. 
ಮೈಸೂರು

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ
ಮೈಸೂರು: ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಗೆ ಕಾನೂನಿನ ಖಾತ್ರಿ ನೀಡಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದ ವ್ಯಾಪ್ತಿಗೆ ಕೃಷಿ, ಡೈರಿ ಮತ್ತು ಕೋಳಿ ವಲಯಗಳನ್ನು ಒಳಗೊಂಡಿರಬಾರದು ಮತ್ತು ಯುಎಸ್‌ನಿಂದ ಆಹಾರ ಮತ್ತು ಕೃಷಿ ಉತ್ಪನ್ನಗಳ ಆಮದಿನ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಡೆಯುತ್ತಿರುವ ರಬಿ ಋತು ಬೆಳಗಳಾದ ವಿಶೇಷವಾಗಿ ಗೋಧಿ, ಸಾಸಿವೆ, ಜೋಳ ಮತ್ತು ಸೂರ್ಯಕಾಂತಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ  ಖರೀದಿಸುವುದನ್ನು ಖಚಿತಪಡಿಸಿಕೊಳ್ಳಬೇಕು. 
ಹರಿಯಾಣ ಸರ್ಕಾರವು ರೈತರಿಗೆ ಅನಾನುಕೂಲತೆಯನ್ನುಂಟುಮಾಡುವ ಹೊಸ ಕಠಿಣ ನಿಯಮ ಜಾರಿಗೆ ತರುವ ಮೂಲಕ ಗೋಧಿ ಖರೀದಿ ಪ್ರಕ್ರಿಯೆಯನ್ನು ಅಪ್ರಾಯೋಗಿಕ ಮತ್ತು ಸಂಕೀರ್ಣಗೊಳಿಸಿದೆ. 
ಗೇಟ್‌ಪಾಸ್‌ಗಳಿಗೆ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಟ್ರ್ಯಾಕ್ಟರ್-ಟ್ರಾಲಿ ನಂಬರ್ ಪ್ಲೇಟ್‌ನ ಫೋಟೋವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡುವುದರಿಂದ ಮಂಡಿಗಳ ಹೊರಗೆ ದೀರ್ಘ ಸಂಚಾರ ಜಾಮ್ ಉಂಟಾಗುತ್ತದೆ.  ರೈತರನ್ನು ಕಿರುಕುಳ ಮತ್ತು ಹಿಂಸೆ ನೀಡಲು ಈ ಕಠಿಣ ನಿಯಮ ಜಾರಿಗೆ ತರಲಾಗುತ್ತಿದ್ದು, ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದೂ ಒತ್ತಾಯಿಸಲಾಗಿದೆ.
ಆಲೂಗಡ್ಡೆ ಬೆಲೆ ಕುಸಿತದಿಂದಾಗಿ ರೈತರು ತಮ್ಮ ಇನ್‌ಫುಟ್ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇತ್ತೀಚೆಗೆ ಆಲೂಗಡ್ಡೆ ರೈತರಾದ ಜಸ್ಕರನ್ ಸಿಂಗ್ ಮತ್ತು ಜಸ್ವಿಂದರ್ ಸಿಂಗ್ (ಪಂಜಾಬ್), ಮತ್ತು ಸೋನ್ಪಿರ್ ಸಿಂಗ್ ಕುಶ್ವಾಹ ಮತ್ತು ವಿಕಾಸ್ ಚೌಧರಿ (ಉತ್ತರ ಪ್ರದೇಶ) ಅವರ ಆತ್ಮಹತ್ಯೆಗಳು ಇಡೀ ರಾಷ್ಟ್ರವನ್ನು ಆಘಾತಗೊಳಿಸಿವೆ. 
ಅಂತಹ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಆಲೂಗಡ್ಡೆ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಅನ್ನು ನೀಡಬೇಕು. ಸಮಂಜಸ ಬೆಲೆಯಲ್ಲಿ ಆಲೂಗಡ್ಡೆ ಖರೀದಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರೈತರ ಪ್ರತಿಭಟನೆಯ ಸಮಯದಲ್ಲಿ ದಾಖಲಾಗಿರುವ ದೇಶದಲ್ಲಿ ಹಾಗೂ ರಾಜ್ಯದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ರೈತರ ವಿರುದ್ಧ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಮನವಿ ಸ್ವೀಕರಿಸಿದರು. ರೈತರ ಮುಖಂಡರಾದ ಅತ್ತಹಳ್ಳಿ ದೇವರಾಜ್, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ವಾಜಮಂಗಲ ನಾಗೇಂದ್ರ, ಬಸವನಹಳ್ಳಿ ನಂಜುಂಡ ಇದ್ದರು.