ರಂಗಯಾನ ಟ್ರಸ್ಟ್‌ನಿಂದ ಆರಂಭಗೊಂಡ ಐದು ದಿನಗಳವರೆಗೆ ಆಯೋಜಿಸಿರುವ ವಿದ್ಯಾರ್ಥಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಾ.ವಸುಂಧರಾ ದೊರೆಸ್ವಾಮಿ, ಸ್ವಾಮಿ ಚಿದ್ರೂಪಾನಂದ ಸರಸ್ವತಿ, ಬಿ.ಎಂ.ರಾಮಚಂದ್ರ, ಗೀತಾ ಮೊಂಟಡ್ಕ, ಡಾ.ಶಶಿಧರ್ ನರೇಂದ್ರ, ವಿ.ಎನ್. ಮಲ್ಲಿಕಾರ್ಜುನಸ್ವಾಮಿ ವಿಕಾಸ್‌ಚಂದ್ರ ಇತರರು ಇದ್ದರು.
- ಇತ್ತೀಚಿನ ದಿನಗಳಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದು ಸಂತೋಷದ ಸಂಗತಿ
- ವ್ಯಕ್ತಿತ್ವ ವಿಕಸನಗೊಳ್ಳಲು ಯಾವುದಾದರೂ ಚಟುವಟಿಕೆಯಲ್ಲಿ ಇರಬೇಕು
ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ರಂಗಭೂಮಿ ಸೇರಿದಂತೆ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಹಿರಿಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅಭಿಪ್ರಾಯಪಟ್ಟರು.
ರಂಗಯಾನ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಐದು ದಿನಗಳವರೆಗೆ ಆಯೋಜಿಸಿರುವ ಬಣ್ಣ ಮಾಂತ್ರಿಕ ಬಿ.ಎಂ.ರಾಮಚಂದ್ರ ವಿದ್ಯಾರ್ಥಿ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದು ಸಂತೋಷದ ಸಂಗತಿ. ಇಂತಹ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಹೇಳಿದರು.
ಕಳೆದ 50 ವರ್ಷಗಳಿಂದಲೂ ರಂಗಭೂಮಿ ಏಳಿಗೆಗಾಗಿ ದುಡಿಯುತ್ತಿರುವ ಹಿರಿಯ ರಂಗಕರ್ಮಿ ಬಿ.ಎಂ.ರಾಮಚಂದ್ರ ಅವರ ಹೆಸರಿನಲ್ಲಿ ಐದು ದಿನಗಳ ನಾಟಕೋತ್ಸವ ಆಯೋಜಿಸಿರುವುದು ಉತ್ತಮ ಸಂಗತಿ. ಕಲಾವಿದರಿಗೆ ಮೇಕಪ್, ವಸ್ತ್ರ ಸೇರಿದಂತೆ ನೇಪಥ್ಯದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ನಾನು ಹೊರ ದೇಶಗಳಿಗೆ ಹೋಗುವಾಗಲೂ ಅವರ ಸೇವೆ ಅತ್ಯಮೂಲ್ಯ ಎಂದರು.
ಆರ್ಷ ವಿದ್ಯಾಕೇಂದ್ರ ಹಾಗೂ ಅಕ್ಷಯ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಚಿದ್ರೂಪಾನಂದ ಸರಸ್ವತಿ, ಹಿರಿಯ ರಂಗಕರ್ಮಿ ಬಿ.ಎಂ.ರಾಮಚಂದ್ರ, ಹಿರಿಯ ಕಲಾವಿದೆ ಗೀತಾ ಮೊಂಟಡ್ಕ, ಕಲಾವಿದ ವಿಕಾಸ್‌ಚಂದ್ರ ಇದ್ದರು
ಧಾರವಾಡದ ಹಿರಿಯ ರಂಗನಿರ್ದೇಶಕ ಡಾ.ಶಶಿಧರ್ ನರೇಂದ್ರ, ನಿವೃತ್ತ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಇದೇ ವೇಳೆ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯಪ್ರದರ್ಶನ ನೀಡಿ, ಪ್ರೇಕ್ಷಕರ ಮನಗೆದ್ದರು.