ಧೀರಜ್ ಗೌಡ ಬಂಧಿತ ಆರೋಪಿ.  
ಮೈಸೂರು

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದವನ ಹತ್ಯೆ

ನಾಗೇಶ ಎಸ್
ತಿ.ನರಸೀಪುರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಸೋಮವಾರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಬಂಧಿಸಿದ್ದಾರೆ.
ಪಟ್ಟಣದ ಹೊಸ ತಿರುಮಕೂಡಲು ನಿವಾಸಿ ಧೀರಜ್ ಗೌಡ(21) ಬಂಧಿತ ಆರೋಪಿ. ಹೊಸ ತಿರುಮಕೂಡಲು ನಿವಾಸಿ ಆರ್.ವಿನೋದ್ ಕುಮಾರ್‌ನನ್ನು ಇತ್ತೀಚೆಗೆ ಹಳೇ ತಿರುಮಕೂಡಲು ವೃತ್ತದ ಫ್ಲೈ ಓವರ್‌ನ ಅಂಡರ್ ಪಾಸ್ ಕೆಳಗೆ ಕಣ್ಣಿಗೆ ಕಾರದಪುಡಿ ಎರಚಿ, ಲಾಂಗ್‌ನಿಂದ ಕೊಚ್ಚಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.
ಮೃತನ ಸಹೋದರ ಕೊಲೆ ಪ್ರಕರಣದ ಸಂಬಂಧ ಧೀರಜ್‌ಗೌಡನ ಮೇಲೆ ಶಂಕೆ ವ್ಯಕ್ತಪಡಿಸಿ, ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್ಪಿ ವಿಷ್ಣುವರ್ಧನ್ ಹಾಗೂ ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಜಿ.ಎಸ್.ರಘು ಅವರು ಭೇಟಿ ನೀಡಿ, ಪರಿಶೀಲನಡೆಸಿ ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದರು. ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಆದಿಚುಂಚನಗಿರಿಯಲ್ಲಿ ತಲೆ ಮರೆಸಿಕೊಂಡಿದ್ದ ಧೀರಜ್ ಗೌಡ ನನ್ನ ಬಂಧಿಸುವಲ್ಲಿ ಯಶಸ್ವಿಯಾದರು.
ವಿನೋದ್ ಕುಮಾರ್ ಪತ್ನಿ ಅನಿತಾ ಜತೆ ಧೀರಜ್ ಗೌಡ ಅಕ್ರಮ ಸಂಬಂಧವಿತ್ತು. ಇದಕ್ಕೆ ಅಡ್ಡಿಯಾಗಿದ್ದ ಆತನನ್ನು ಕೊಲೆ ಮಾಡಿದ್ದಾಗಿ ಧೀರಜ್ ಗೌಡ ತನಿಖೆ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪ್ಪೆಕ್ಟರ್ ಜಗದೀಶ್ ಧೂಳ್‌ಶೆಟ್ಟಿ, ಸಿಬ್ಬಂದಿ ಇದ್ದರು.