ಕರ್ನಾಟಕ ರಾಜ್ಯ ಭೀಮ್ ಸೇನೆ ವತಿಯಿಂದ ಸೋಮವಾರ ನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
- ಪಾಲಿಕೆ ಕಚೇರಿ ಮುಂದೆ ಭೀಮ್ ಸೇನೆ ಪ್ರತಿಭಟನೆ
ನಗರದ ಬಸವನಗುಡಿ ಪಾರ್ಕ್‌ನ ಒಳಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಜಾಗ ಗುರುತಿಸಿ ಅನುಮತಿ ನೀಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಭೀಮ್ ಸೇನೆ ವತಿಯಿಂದ ಸೋಮವಾರ ನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಹೆಬ್ಬಾಳಿನ ಬಸವನಗುಡಿ ಪ್ರದೇಶದಲ್ಲಿ ಕುವೆಂಪು, ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಹಾಗೂ ಯೋಗಮಂಟಪ ನಿರ್ಮಾಣಕ್ಕೆ ಮಹಾನಗರಪಾಲಿಕೆ ಅನುಮತಿ ನೀಡಿರುವುದಲ್ಲದೆ ಅಗತ್ಯ ಸಹಕಾರ ಮತ್ತು ಅನುದಾನವನ್ನೂ ಒದಗಿಸಿದೆ. ಆದರೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತರ ಸಮುದಾಯಗಳ ನಾಯಕರ ಪ್ರತಿಮೆಗಳ ಸ್ಥಾಪನೆಗೆ ಅನುಸರಿಸಿರುವ ಮಾನದಂಡಗಳನ್ನೇ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೂ ಅನ್ವಯಿಸಿ, ಬಸವನಗುಡಿ ಪಾರ್ಕ್‌ನಲ್ಲಿ ಸೂಕ್ತ ಜಾಗ ಗುರುತಿಸಿ ತಕ್ಷಣ ಅನುಮತಿ ನೀಡಬೇಕು. ಒಂದು ವೇಳೆ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡದಿದ್ದಲ್ಲಿ, ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಇತರ ಸಮುದಾಯಗಳ ಗಣ್ಯರ ಪ್ರತಿಮೆಗಳ ಕಾನೂನುಬದ್ಧತೆ ಪರಿಶೀಲಿಸಿ, ಅಗತ್ಯವಿದ್ದರೆ ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾನಗರಪಾಲಿಕೆ ತಕ್ಷಣ ಸೂಕ್ತ ಆದೇಶ ಹೊರಡಿಸದಿದ್ದಲ್ಲಿ, ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸುವುದರ ಜತೆಗೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎಸ್.ಸರ್ವೇಶ್, ಪ್ರಧಾನ ಕಾರ್ಯದರ್ಶಿ ಎಚ್.ಧರ್ಮರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.