ಹಿಂದೂ ಸಮಾಜೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ಪದಾಧಿಕಾರಿಗಳು ಕರಪತ್ರ ಬಿಡುಗಡೆ ಮಾಡಿದರು. ಎಂ.ಸಿ.ಹರೀಶ್, ಸಚ್ಚಿದಾನಂದ, ಷಣ್ಮುಖರಾವ್, ಮಂಜುಳಾ, ದೇವೇಂದ್ರ, ಮಂಜುನಾಥ ಇತರರಿದ್ದರು. 
ಮೈಸೂರು

ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ಹೊಂದಿರುವ ರಾಷ್ಟ್ರ ಭಾರತ

ಪಿರಿಯಾಪಟ್ಟಣ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ ಎಂದು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ, ವಕೀಲ ಎಂ.ಸಿ.ಹರೀಶ್ ತಿಳಿಸಿದರು
ಜ.31ರಂದು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಕಚೇರಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಬೇರೆ ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡದ ಸನಾತನ ಧರ್ಮವನ್ನು ಪಾಲಿಸುತ್ತಿರುವ ರಾಷ್ಟ್ರ ನಮ್ಮದಾಗಿದ್ದು, ಹಿಂದುಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆರಂಭಿಸಲಾಗಿದೆ ಎಂದರು. ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಘ ಶತಾಬ್ದಿ-100 ಹೆಸರಿನಲ್ಲಿ ದೇಶದಾದ್ಯಂತ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಭವಿಷ್ಯದ ಜೀವನಶೈಲಿಗೆ ಪಂಚ ಪರಿವರ್ತನೆಗಳು ಎಂಬ ತತ್ವದಡಿಯಲ್ಲಿ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಧರ್ಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಏಕತೆಗಾಗಿ ಎಲ್ಲ ವರ್ಗದ ಜನರನ್ನು ಒಂದು ವೇದಿಕೆಯಡಿಯಲ್ಲಿ ಸೇರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸ್ವಾಭಿಮಾನ ಸಂಪನ್ನ, ಶಕ್ತಿ ಸಂಪನ್ನ, ಹಿಂದೂ ಸಮಾಜದ ಜಾಗೃತಿ ಈ ಹಿಂದೂ ಸಮಾಜೋತ್ಸವದ ಮುಖ್ಯ ಗುರಿಯಾಗಿದೆ. ಜ.31ರ ಮಧ್ಯಾಹ್ನ 2.30ಕ್ಕೆ ಪಟ್ಟಣದ ಶ್ರೀಕನ್ನಂಬಾಡಿಯಮ್ಮ ದೇವಸ್ಥಾನದ ಮುಂಭಾಗದಿಂದ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಮೆರವಣಿಗೆಯು ಬಿ.ಎಂ.ರಸ್ತೆ, ಸಂತೆಪೇಟೆ, ಶ್ರೀಮಸಣಿಕಮ್ಮ ದೇವಾಲಯದ ಮುಂಭಾಗ ಸಾಗಿ ಕೋಟೆ ಶ್ರೀವೈದ್ಯನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಅಂದು ಸಂಜೆ 5 ಗಂಟೆಗೆ ಶ್ರೀವೈದ್ಯನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ಪದಾಧಿಕಾರಿಗಳಾದ ಸಚ್ಚಿದಾನಂದ, ಷಣ್ಮುಖರಾವ್, ಮಂಜುಳಾ, ದೇವೇಂದ್ರ, ಮಂಜುನಾಥ, ಅನಿಶ್, ಸುಬ್ಬಣ್ಣ, ಚಿಕ್ಕೀರಯ್ಯ ಮತ್ತಿತರರಿದ್ದರು.