ಪಿರಿಯಾಪಟ್ಟಣ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯಲ್ಲಿ ಮತದಾರರ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿ ಕೈ ಬಿಟ್ಟಿರುವುದನ್ನು ವಿರೋಧಿಸಿ ಸಂಘದ ಕಚೇರಿ ಮುಂಭಾಗ ಕೆಲ ಶಿಕ್ಷಕರು ಪ್ರತಿಭಟನೆ ನಡೆಸಿದರು. ಬಿ.ಎಸ್.ಅಶೋಕ, ಬಿ.ಆರ್.ರವಿಕುಮಾರ್, ಎಚ್.ಕೆ.ಶಿವಮೂರ್ತಿ ಇತರರಿದ್ದಾರೆ.
ಪಿರಿಯಾಪಟ್ಟಣ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಮತದಾರರ ಪಟ್ಟಿಯಿಂದ 13 ಶಿಕ್ಷಕರನ್ನು ಕೈ ಬಿಟ್ಟಿರುವುದನ್ನು ವಿರೋಧಿಸಿ ಸಂಘದ ಕಚೇರಿ ಮುಂಭಾಗ ಕೆಲ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಶಿಕ್ಷಕ ಬಿ.ಎಸ್.ಅಶೋಕ ಮಾತನಾಡಿ, ನಾವು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದೆವು. ಆದರೆ ನಮ್ಮ ಎದುರಾಳಿಗಳು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಉದ್ದೇಶಪೂರ್ವಕವಾಗಿ ನಮ್ಮನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ನಮ್ಮ ಗಮನಕ್ಕೆ ಬಾರದೆ ಈ ರೀತಿ ಮಾಡುವ ಮೂಲಕ ನಮಗೆ ಅನ್ಯಾಯ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ಶಿಕ್ಷಕ ಬಿ.ಆರ್.ರವಿಕುಮಾರ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮತದಾರರ ಪಟ್ಟಿಯನ್ನು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ತಯಾರಿಸಿ ಒಟ್ಟು 602 ಮತದಾರರು ಎಂದು ನಮೂದಿಸಿ ಈ ಪಟ್ಟಿಯನ್ನು ರಾಜ್ಯ ಸಂಘಕ್ಕೆ ಕಳುಹಿಸಿ ಅನುಮೋದನೆಯನ್ನು ಪಡೆದಿದ್ದಾರೆ. ಆದರೆ ತದನಂತರ ಯಾವುದೇ ಕಾರಣವನ್ನು ನೀಡದೆ ಒಂದೇ ತಂಡದ 13 ಅಭ್ಯರ್ಥಿಗಳನ್ನು ಮತದಾರ ಪಟ್ಟಿಯಿಂದ ಕೈ ಬಿಡುವ ಮೂಲಕ ಅಕ್ರಮವೆಸಗಿದ್ದಾರೆ. ನಮ್ಮನ್ನು ಕೈ ಬಿಡುವ ಉದ್ದೇಶವಿದ್ದರೆ ರಾಜ್ಯ ಸಂಘ ಅನುಮೋದನೆ ನೀಡುವ ಮೊದಲೇ ಕೈಬಿಡಬೇಕಾಗಿತ್ತು. ಆದರೆ ಯಾವುದೇ ಕಾರಣವನ್ನು ನೀಡದೆ ಸೋಲಿನ ಭೀತಿಯಿಂದ ಕೆಲವರು ಚುನಾವಣೆಯಲ್ಲಿ ಅಕ್ರಮ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನಿಗದಿಯಾಗಿರುವ ಚುನಾವಣೆಯನ್ನು ಮುಂದೂಡಬೇಕು ಹಾಗೂ 13 ಮತದಾರರ ಹೆಸರನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
ಶಿಕ್ಷಕ ಎಚ್.ಕೆ.ಶಿವಮೂರ್ತಿ ಮಾತನಾಡಿ, ಶಿಕ್ಷಕರ ಭವನದ ಕಟ್ಟಡವನ್ನು ನಿರ್ಮಿಸಲು ನಡೆಸಿರುವ ಅಕ್ರಮವನ್ನು ಮರೆಮಾಚಿಸುವ ಉದ್ದೇಶದಿಂದ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸಬಾರದೆಂದು ನಮ್ಮನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.
ಶಿಕ್ಷಕರಾದ ಎಂ.ಬಿ.ಚಂದ್ರು, ಕೆ.ಎಸ್.ವಿನುತಾ, ಆರ್.ಸಾಕಮ್ಮ, ಈ.ಬಿ.ವೆಂಕಟೇಶ್, ಮಹೇಶ್, ಕೆ.ಸಿ.ಯುವರಾಜ್, ಕೆ.ಲೋಕೇಶ್, ಎ.ಡಿ.ಬಸವರಾಜ್, ಶ್ರೀನಿವಾಸ್, ಎಚ್.ಎಸ್.ಮಂಜುನಾಥ್ ಹಾಜರಿದ್ದರು.