ಪಿರಿಯಾಪಟ್ಟಣದ ಚನ್ನಕೇಶವ ದೇವಾಲಯದ ಬಳಿ ಪುರಾತತ್ವ ಇಲಾಖೆ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ದೂರು ನೀಡಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಎಡಿಎಲ್‌ಆರ್ ಮುನಿಯಪ್ಪ ಮತ್ತಿತರರಿದ್ದರು. 
ಮೈಸೂರು

ಮುಚ್ಚಿರುವ ಕಂದಕಗಳನ್ನು ಪರಿಶೀಲಿಸಿ

ಪಿರಿಯಾಪಟ್ಟಣ:

ಪಟ್ಟಣದ ಕೋಟೆ ಪ್ರದೇಶದಲ್ಲಿ ಮುಚ್ಚಿರುವ ಕಂದಕಗಳನ್ನು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ನಿಸರ್ಗಪ್ರಿಯ ಸೂಚಿಸಿದರು.

ಪಟ್ಟಣದ ಚನ್ನಕೇಶವ ದೇವಾಲಯದ ಬಳಿ ಪುರಾತತ್ವ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಪರಿಶೀಲನೆಗಾಗಿ ಭೇಟಿ ನೀಡಿದ್ದಾಗ ಸಾರ್ವಜನಿಕರು ದೂರು ನೀಡಿದ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಪಟ್ಟಣಕ್ಕೆ ವೈರಿಗಳು ನುಗ್ಗದಂತೆ ತಡೆಯಲು ಮೈಸೂರು ಮಹಾರಾಜರು ನಿರ್ಮಿಸಿದ್ದ ಕಂದಕವನ್ನು ಕೆಲವರು ಮುಚ್ಚಿ ಜಮೀನು ಮಾಡಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅವನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸರ್ವೇ ಇಲಾಖೆ ಎಡಿಎಲ್‌ಆರ್ ಮುನಿಯಪ್ಪ ಅವರಿಗೆ ಸೂಚನೆ ನೀಡಿದರು.
ಸ್ಥಳೀಯ ನಿವಾಸಿ ನಂಜುಂಡಪ್ಪ ದೂರು ಸಲ್ಲಿಸಿ ಮಾತನಾಡಿ, ಕೆಲವರು ಕಂದಕದ ಸುತ್ತಲೂ ಗಣಿಗಾರಿಕೆ ನಡೆಸಿ ಅವುಗಳನ್ನು ಮುಚ್ಚಿ ಆಸ್ತಿಯಂತೆ ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ. ದಾಖಲೆಯಲ್ಲೂ ಕಂದಕ ಇರುವುದಕ್ಕೆ ಸರ್ವೇ ನಕ್ಷೆ ಇದೆ. ಇದನ್ನು ಸರ್ವೇ ಇಲಾಖೆಯೂ ಒಪ್ಪಿಕೊಂಡಿದ್ದಾರೆ. ಕಂದಕಗಳು ಸರ್ಕಾರಿ ಸೊತ್ತಾಗಿದ್ದು ಅವುಗಳನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ಈ ಹಿಂದೆ ಎಪಿಎಂಸಿಗೆ ಮಂಜೂರಾಗಿ ಕೈಬಿಟ್ಟ ಭೂಮಿಯನ್ನು ಅದಲು ಬದಲು ಮಾಡಿ ಖಾತೆ ಮಾಡಿಸಿಕೊಳ್ಳಲಾಗಿದೆ. ನಕಲಿ ಎಂಆರ್ ಸೃಷ್ಟಿಸಲಾಗಿದೆ ಎಂದು ದೂರಿದರು.
ಚೆನ್ನಕೇಶವ ದೇವಾಲಯದ ಸುತ್ತಲೂ 300 ಮೀಟರ್ ಅಂತರವನ್ನು ಗುರುತಿಸಬೇಕು ಮತ್ತು ಕಂದಕ ಮುಚ್ಚಿಕೊಂಡಿರುವ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ನಿಸರ್ಗಪ್ರಿಯ, ಅಕ್ರಮ ಖಾತೆ ಮಾಡಿಸಿಕೊಂಡಿರುವ ಬಗ್ಗೆ ಉಪ ವಿಭಾಗ ಅಧಿಕಾರಿಗಳಿಗೆ ದೂರು ನೀಡಿ ಕ್ರಮವಹಿಸಲಾಗುವುದು, ಕಂದಕದ ಬಗ್ಗೆ ಸರ್ವೇ ಇಲಾಖೆಯಿಂದ ಸರ್ವೇ ಮಾಡಿಸಲಾಗುವುದು. ಹಿಸ್ಸಾ ಅದಲು ಬದಲಾಗಿರುವ ಸಾಧ್ಯತೆ ಇದೆ ಅಂದ ಮಾತ್ರಕ್ಕೆ ಆ ಭೂಮಿ ಅವರದಲ್ಲ ಎಂಬುದು ವಾದ ಸರಿಯಲ್ಲ, ಸರ್ಕಾರಿ ಭೂಮಿ ಇದ್ದರೆ ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಮಾತನಾಡಿ, ದೇವಾಲಯದ ಸುತ್ತಲೂ 300 ಮೀಟರ್ ಅಂತರದಲ್ಲಿ ಯಾವುದೇ ಚಟುವಟಿಕೆ ಮಾಡಬಾರದು ಎಂಬುದು ಸುಳ್ಳು. ಇದರ ಬದಲಾಗಿ ಮನೆ ಕಟ್ಟುವವರು ನಮ್ಮ ಬಳಿ ಎನ್‌ಒಸಿ ಪ್ರಮಾಣ ಪತ್ರ ಪಡೆದುಕೊಳ್ಳತಕ್ಕದ್ದು ಎಂಬ ಷರತ್ತು ಮಾತ್ರ ಇದೆ ಎಂದರು. ದೇವಾಲಯದ ಅಭಿವೃದ್ಧಿ ಮತ್ತು ಅದರ ಮರು ನಿರ್ಮಾಣ ಕಾರ್ಯಕ್ಕೆ ಇಲಾಖೆ ಬದ್ಧವಾಗಿದೆ. ಆದರೆ ಕಾಮಗಾರಿ ಆರಂಭಿಸಲು ಬಂದರೆ ಸ್ಥಳೀಯ ಜನರು ತೊಂದರೆ ನೀಡಿ ಗುತ್ತಿಗೆದಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ದೇವಾಲಯವನ್ನು ಪುರಾತತ್ವ ಇಲಾಖೆಯಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಪಿ.ಜಿ.ರವಿ ಮಾತನಾಡಿ, ಪುರಾತತ್ವ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ನಮಗೆ ಇಷ್ಟವಿಲ್ಲ, ಬದಲಾಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಮನವಿ ಮಾಡಿದರು.
ದೂರುದಾರರಾದ ಡಿ.ದೇವಣ್ಣ, ಎನ್.ರವಿಕುಮಾರ್, ಚಂದ್ರೇಗೌಡ, ಪುರಾತತ್ವ ಇಲಾಖೆಯ ಸಿಬ್ಬಂದಿ ಜೆ.ಸತೀಶ್, ಸುನಿಲ್, ಸರ್ವೇಯರ್ ಶಿವಪ್ಪಾಚಾರಿ, ಕಂದಾಯ ಇಲಾಖೆಯ ಆರ್‌ಐ ಪಾಂಡುರಂಗ, ವಿಎ ಪಾಂಡು, ಪುರಸಭೆ ಮಾಜಿ ಸದಸ್ಯ ರವಿ, ಪುರಸಭೆ ಸಿಬ್ಬಂದಿ ರಾಮಕೃಷ್ಣ, ಚಂದನ್ ಮತ್ತಿತರರು ಹಾಜರಿದ್ದರು.