ಪಿರಿಯಾಪಟ್ಟಣ: ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ಸಂಯುಕ್ತ ಗೊಬ್ಬರಗಳನ್ನು ಬಳಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮಾ ರೈತರಿಗೆ ಮನವಿ ಮಾಡಿದ್ದಾರೆ.
ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹದಿನೆಂಟು ಪೋಷಕಾಂಶಗಳ ಅಗತ್ಯವಿರುತ್ತೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತವೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕ್ಯಾಲ್ಸಿಯಂ ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು ಇವುಗಳನ್ನು ಲಘು ಪೋಷಕಾಂಶಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶ ಕೊರತೆಯಾದರೂ ಸಸ್ಯಗಳು ಸಮೃದ್ಧಿಯಾಗಿ ಬೆಳೆಯಲಾರವು ಹಾಗೂ ಇದರಿಂದ ನಿರೀಕ್ಷಿತ ಇಳುವರಿ ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿದ್ದು ಪೊಟ್ಯಾಷ್ ಲಭ್ಯವಿರುವುದಿಲ್ಲ. ಪೊಟ್ಯಾಷ್ ಅಂಶವು ಬೆಳೆಗಳಿಗೆ ರೋಗ ನಿರೋಧಕ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯವಾಗಿದ್ದು, ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹದಾಗಿದೆ.
ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಸಾರಜನಕಯುಕ್ತ ಗೊಬ್ಬರಗಳಾದ ಅಮೋನಿಯಂ ಸಲ್ಫೇಟ್, ನೈಟ್ರೇಟ್ ಮತ್ತು ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಅನ್ನು ಬಳಸಬಹುದು. ನ್ಯಾನೋ ಯೂರಿಯಾ ಮತ್ತು ನ್ಯಾನೋ ಯೂರಿಯಾ ಪ್ಲಸ್ ಅನ್ನು ಎಲೆಗಳ ಮೇಲೆ ಸಿಂಪಡಣೆ ಕೂಡ ಮಾಡಬಹುದಾಗಿದೆ. ಅಲ್ಲದೆ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ರೈತರಿಗೆ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.