ಬೆಟ್ಟದಪುರದ ಹರದೂರು ಗೇಟ್ ಬಳಿಯ ಬಸವೇಶ್ವರ ದೇವಾಲಯದ ಆವರಣದಲ್ಲಿ ತಹಸೀಲ್ದಾರ್ ಜೆ.ನಿಸರ್ಗ ಪ್ರಿಯ ಹಾಗೂ ಗಣ್ಯರು ಜಾನುವಾರುಗಳಿಗೆ ಪೂಜೆ ಸಲ್ಲಿಸಿ, ಜಾನುವಾರು ಜಾತ್ರೆಗೆ ಚಾಲನೆ ನೀಡಿದರು. ರಾಜಶೇಖರ್, ಶಶಿಧರ್, ಸಂದೀಪ್, ಕೃಷ್ಣಪ್ರಸಾದ್, ಪ್ರಶಾಂತ್, ಮಹೇಶ್, ನಿರಂಜನ್, ಗುರುನಾಯಕ್ ಇತರರಿದ್ದರು. 
ಮೈಸೂರು

ಬೆಟ್ಟದಪುರ ಜಾನುವಾರು ಜಾತ್ರೆಗೆ ಚಾಲನೆ

ಬೆಟ್ಟದಪುರ: ಪಿರಿಯಾಪಟ್ಟಣ ಭಾಗದಲ್ಲಿ ಪ್ರಸಿದ್ಧವಾಗಿರುವ ಬೆಟ್ಟದಪುರ ಜಾನುವಾರು ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿದ್ದು, ಇದರ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಪಿರಿಯಾಪಟ್ಟಣ ತಹಸೀಲ್ದಾರ್ ಜೆ.ನಿಸರ್ಗಪ್ರಿಯ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಹರದೂರು ಗೇಟ್ ಬಳಿಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಜಾನುವಾರುಗಳಿಗೆ ಪೂಜೆ ಸಲ್ಲಿಸಿ, ಜಾನುವಾರು ಜಾತ್ರೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಜಾನುವಾರುಗಳ ಸಾಕಣೆ ರೈತರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದ್ದು, ಇಂತಹ ಜಾತ್ರೆಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತವೆ. ಜಾನುವಾರುಗಳ ಆರೋಗ್ಯ ಹಾಗೂ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಪಶುವೈದ್ಯರ ತಂಡವನ್ನು ನಿಯೋಜಿಸಿ ಉಚಿತ ಆರೋಗ್ಯ ತಪಾಸಣೆ, ಲಸಿಕೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಾತ್ರಾ ಮೈದಾನದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಗೃಹ, ವಾಹನ ನಿಲುಗಡೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ ಜ.27ರವರೆಗೆ ನಡೆಯಲಿರುವ ಈ ಜಾತ್ರೆಯಿಂದ ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದ್ದು, ಜಾತ್ರೆಗೆ ಕೊಡಗು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಹಲವು ಭಾಗಗಳಿಂದ ಜಾನುವಾರು ಮಾರಾಟಗಾರರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪಂಚಾಯಿತಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಜಾತ್ರೆ ಮೈದಾನದಲ್ಲಿರುವ ಪಂಪ್‌ಸೆಟ್ ವಿದ್ಯುತ್ ಸರಬರಾಜನ್ನು ಬೆಳಗ್ಗೆಯಿಂದ ಸಂಜೆಯವರೆಗೆ ನೀಡಬೇಕೆಂದು ರೈತರು ಮನವಿ ಮಾಡಿದರು. ವಿದ್ಯುತ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದು ಸೆಸ್ಕ್ ಎಇಇ ಪ್ರಶಾಂತ್ ತಿಳಿಸಿದರು.
ಜಾತ್ರೆ ಸುಗಮವಾಗಿ ನಡೆಯಲಿ, ರೈತರಿಗೆ ಉತ್ತಮ ಲಾಭ ದೊರಕಲಿ ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಸಂಕಲ್ಪದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಜಾನುವಾರುಗಳಿಗೆ ಹಣ್ಣು ಫಲ ನೀಡಲಾಯಿತು.
ಉಪ ತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಸಂದೀಪ್, ಬೆಟ್ಟದ ದೇಗುಕ ಅರ್ಚಕ ಕೃಷ್ಣಪ್ರಸಾದ್, ಸೆಸ್ಕ್ ಎಇಇ ಪ್ರಶಾಂತ್, ಮಹೇಶ್, ಗ್ರಾಮ ಆಡಳಿತಾಧಿಕಾರಿ ನಿರಂಜನ್, ಗುರುನಾಯಕ್, ಎಲ್ಲಪ್ಪ, ವೀಕ್ಷಿತಾ, ಕಾವ್ಯಾ, ಕುಮುದಾ, ಅಯ್ಯಪ್ಪ, ಶ್ರೀನಿವಾಸ್, ಪಂಚಾಯಿತಿ ಕಾರ್ಯದರ್ಶಿ, ಪಾಂಡು, ಸಿಬ್ಬಂದಿ ಅಣ್ಣಯ್ಯ, ಮುಖಂಡರಾದ ಬಿ.ಜೆ ದೇವರಾಜು, ಮೈಲಾರಿಗೌಡ, ಗಣೇಶ್, ಮರೀಗೌಡ, ಕಾಳೇಗೌಡ, ಹರೀಶ್, ಹರದೂರು ಮೈಲಾರಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಇದ್ದರು.