ರಂಗಾಯಣದ ಆವರಣದಲ್ಲಿ ಆಯೋಜಿಸಿರುವ ಬಹುರೂಪಿಯಲ್ಲಿ ಮಕ್ಕಳ ಬಹುರೂಪಿಗೆ ಕಲಾವಿದೆ ಕಲಾವಿದೆ ರಾಮೇಶ್ವರಿ ವರ್ಮ ಚಾಲನೆ ನೀಡಿದರು 
ಮೈಸೂರು

ಒಂದು ನಾಟಕ ಮಾಡಿದರೆ ಒಂದು ಪಠ್ಯ ಓದಿದಂತೆ: ಕಲಾವಿದೆ ರಾಮೇಶ್ವರಿ ವರ್ಮ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ನಾಟಕದಲ್ಲಿ ಅಭಿನಯಿಸುವುದರಿಂದ ಮಕ್ಕಳಲ್ಲಿ ಧೈರ್ಯ, ಮನೋ ವಿಕಾಸಗೊಳ್ಳುತ್ತದೆ
  • ಶಾಲೆಗಳಲ್ಲಿ ಮಕ್ಕಳು ನಾಟಕದಲ್ಲಿ ಅಭಿನಯಿಸಲು ವೇದಿಕೆ ಕಲ್ಪಿಸಬೇಕು.
ಮೈಸೂರು: ರಂಗಾಯಣದ ಆವರಣದಲ್ಲಿ ಆಯೋಜಿಸಿರುವ ಬಹುರೂಪಿಯಲ್ಲಿ ಮಕ್ಕಳ ಬಹುರೂಪಿಯೂ ಅನಾವರಣಗೊಂಡಿತು.
ಮಕ್ಕಳಿಗೆ ರಂಗಾಸಕ್ತಿ ಮೂಡಿಸಲು ಆಯೋಜಿಸಿರುವ ನಾಟಕೋತ್ಸವಕ್ಕೆ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ಕಲಾವಿದೆ ರಾಮೇಶ್ವರಿ ವರ್ಮ ಚಾಲನೆ ನೀಡಿ, ಮಕ್ಕಳು ನಾಟಕ ನೋಡಿದ ನಂತರ ಅದರಲ್ಲಿ ಅಡಕವಾಗಿರುವ ವಿಚಾರಗಳ ಕುರಿತು ಚರ್ಚೆ ಮಾಡಬೇಕು. ಆಗ ಮನಸ್ಸು ವಿಕಾಸವಾಗುತ್ತದೆ. ಮನಸ್ಸು ಅರಳಬೇಕಾದರೆ ನಾಟಕ ನೋಡಬೇಕು ಎಂದು ತಿಳಿಸಿದರು.
ಒಂದು ನಾಟಕ ಮಾಡಿದರೆ ಒಂದು ಪಠ್ಯ ಓದಿದಂತೆ. ಹಾಗಾಗಿ ಶಾಲೆಗಳಲ್ಲಿ ಮಕ್ಕಳು ನಾಟಕದಲ್ಲಿ ಅಭಿನಯಿಸಲು ವೇದಿಕೆ ಕಲ್ಪಿಸಬೇಕು. ನಾಟಕದಲ್ಲಿ ಅಭಿನಯಿಸುವುದರಿಂದ ಮಕ್ಕಳಲ್ಲಿ ಧೈರ್ಯ, ಅನುಭವ ಹಂಚಿಕೊಳ್ಳುವ ಮನೋಭಾವ, ಸ್ನೇಹ, ಬದುಕುವ ರೀತಿ, ಅನಿಸಿದ್ದನ್ನು ಹೇಳುವ ಗುಣಗಳು ಬರುತ್ತವೆ. ಹಾಗಾಗಿ ಮಕ್ಕಳು ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಸಲಹೆ ನೀಡಿದರು.
ನಾಟಕವನ್ನು ಮನಸ್ಸಿನಿಂದ ನೋಡಬೇಕು. ಅದು ಮಕ್ಕಳ ಮೇಲೆ ಗಾಢ ಪ್ರಭಾವ ಬೀರುತ್ತದೆ. ಶಾಲೆಗಳಲ್ಲಿ ಅಂಬೇಡ್ಕರ್ ಕುರಿತು ನಾಟಕ ಪ್ರದರ್ಶನ ಆಯೋಜಿಸಿದರೆ ಮಕ್ಕಳಿಗೆ ಅವರ ಜೀವನದ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬಹುದಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ.ಜಾಹೀದಾ ಮಾತನಾಡಿ, ಮಕ್ಕಳ ರಂಗಭೂಮಿಯಿಂದ ನಾಟಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ ಎಂದರು.
ರಂಗಸಮಾಜದ ಸದಸ್ಯ ಮಹಾಂತೇಶ್ ಗಜೇಂದ್ರಗಡ ಅವರು ಉತ್ತರ ಕರ್ನಾಟಕದ ಶಂಭು ಬಿರಾದರ ಅವರು ಬರೆದಿರುವ ನಾವು ಎಳೆಯರು ಪದ್ಯವನ್ನು ಓದಿ ಹೇಳಿದರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ, ರಂಗಸಮಾಜದ ಸದಸ್ಯ ಡಾ.ಕೆ. ರಾಮಕೃಷ್ಣಯ್ಯ ಇತರರು ಇದ್ದರು.