ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ನಿಂದ ಕಿರಿಯ ಪವರ್‌ಮನ್‌ಗಳಾಗಿ ಆಯ್ಕೆಗೊಂಡವರಿಗೆ ಆಯೋಜಿಸಿದ್ದ ಸ್ಥಳ ನಿಯುಕ್ತಿ ಹಾಗೂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿದರು. ಕೆ.ಎಂ.ಮುನಿಗೋಪಾಲ್ ರಾಜು, ಜಿ.ರೇಣುಕಾ, ಲಿಂಗರಾಜಮ್ಮ, ಡಾ.ಬಿ.ಆರ್.ರೂಪಾ, ಲೋಕೇಶ್ ಇತರರು ಇದ್ದರು.
- ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು
- ಇತ್ತೀಚಿನ ದಿನಗಳಲ್ಲಿ ಉದ್ಯೋಗ ದೊರೆಯುವುದೆ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ, ಅಭ್ಯರ್ಥಿಗಳು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು
ಮೈಸೂರು:ಉದ್ಯೋಗ ದೊರೆಯುವುದೆ ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ ಸಿಕ್ಕ ಉದ್ಯೋಗವನ್ನು ಶ್ರದ್ಧೆ, ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮದ ಕಾರ್ಯಾಲಯದಲ್ಲಿ ಕೌನ್ಸೆಲಿಂಗ್‌ನಲ್ಲಿ ಕಿರಿಯ ಪವರ್‌ಮನ್ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಹಾಗೂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿರಿಯ ಪವರ್‌ಮನ್‌ಗಳಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಉದ್ಯೋಗ ದೊರೆಯುವುದೆ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ, ಅಭ್ಯರ್ಥಿಗಳು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ತವ್ಯದ ಸಂದರ್ಭದಲ್ಲಿ ಯಾವುದೇ ರೀತಿಯ ದುಷ್ಚಟಗಳಿಗೆ ಬಲಿಯಾಗದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ತಮ್ಮ ಇತಿಮಿತಿ ಅರಿತು ಕಾರ್ಯ ನಿರ್ವಹಿಸಬೇಕು ಎಂದರು.
ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ತರಬೇತಿ ಅವಧಿಯಲ್ಲಿ ನೀಡುವ ಸಲಹೆಗಳನ್ನು ಪರಿಪೂರ್ಣವಾಗಿ ಅರಿತು, ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹಿರಿಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಜನಸಾಮಾನ್ಯರು ದೂರು, ಸಮಸ್ಯೆಗಳನ್ನು ತಿಳಿಸಿದಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು ಎಂದರು.
ಸರ್ಕಾರ ಪಾರದರ್ಶಕ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಾಜ್ಯದೆಲ್ಲೆಡೆ ಮೂರು ಸಾವಿರಕ್ಕೂ ಹೆಚ್ಚು ಪವರ್‌ಮನ್‌ಗಳ ನೇಮಕಾತಿ ನಡೆಸಿದ್ದು, ಯಾವುದೇ ಗೊಂದಲ ಅಥವಾ ಅಡೆತಡೆ ಇಲ್ಲದೆ ಮಾರ್ಗಸೂಚಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದರು.
ಮಧ್ಯವರ್ತಿಗಳಿಗೆ ಕಿವಿಗೋಡದಿರಿ:
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರು ಹಾಗೂ ನಿಗಮದ ಅಧ್ಯಕ್ಷರು ಉದ್ಯೋಗಾವಕಾಶ ಒದಗಿಸಿದ್ದಾರೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ(ಆ ಮತ್ತು ಮಾ.ಸಂ) ಡಾ.ಬಿ.ಆರ್.ರೂಪಾ, ಹಾಸನ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್ ಇತರರು ಇದ್ದರು.
ಸೆಸ್ಕ್‌ನ ಕಿರಿಯ ಪವರ್‌ಮನ್ ಹುದ್ದೆಗಳ ನೇಮಕಾತಿಗೆ 2025ರ ಮೇ 16ರಂದು ಸಹನಾಶಕ್ತಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 293 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಆಯ್ಕೆಗೊಂಡವರಿಗೆ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳ ಆಯ್ಕೆ ಅನುಸಾರವಾಗಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಪತ್ರ ವಿತರಿಸಲಾಯಿತು.