ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಡಿ.ಆರ್.ಪಾಟೀಲ್, ನಿತೀಶ್‌ಪಾಟೀಲ್, ಜಿ.ಲಕ್ಷ್ಮೀಕಾಂತರೆಡ್ಡಿ, ಡಾ.ಕುಮಾರ, ಯುಕೇಶ್‌ಕುಮಾರ್ ಇತರರು ಇದ್ದರು.
ಮೈಸೂರು: ಸಾರ್ವಜನಿಕರಿಗಾಗಿ ಸರ್ಕಾರ ಯೋಜನೆ ರೂಪಿಸುವಾಗ ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಕರ್ನಾಟಕ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮಸಭೆ, ನಗರಮಟ್ಟದಲ್ಲಿ ವಾರ್ಡ್ ಸಭೆಗಳನ್ನು ನಡೆಸುವ ಮೂಲಕ ಜನರಿಗೆ ಬೇಕಾಗುವ ಯೋಜನೆಗಳನ್ನು ರೂಪಿಸಬೇಕು. ಹೀಗೆ ಯೋಜನೆ ರೂಪಿಸುವಾಗ ಜನರು ಕಡ್ಡಾಯವಾಗಿ ಭಾಗವಹಿಸಬೇಕು. ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ನಿರ್ವಹಿಸಿದರೆ ಅಭಿವೃದ್ಧಿ ಬಹಳ ಸುಲಭವಾಗಿ ನಡೆಯುತ್ತದೆ. ಜನರ ಬೇಡಿಕೆ ಬಹಳಷ್ಟು ಇರುತ್ತದೆ. ಜನರಿಂದ ಮಾಹಿತಿ ಪಡೆದು ಯೋಜನೆ ರೂಪಿಸುವುದು ಕಷ್ಟಕರವಾಗಿರುತ್ತದೆ. ಆದರಿಂದ ಯೋಜನೆ ರೂಪಿಸುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಬೇಕು ಎಂದರು.
ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಯಾವ ಫಲಾನುಭವಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಗಮನಹರಿಸಬೇಕಿದೆ. ಜನರ ಪಾಲ್ಗೊಳ್ಳುವಿಕೆಯಿಂದ ಜನೋಪಯೋಗಿ ಕೆಲಸ ಮಾಡಬಹುದು ಎಂಬ ಆಶಯದೊಂದಿಗೆ ಸಭೆಗಳನ್ನು ನಡೆಸುತ್ತಿದೆ. ಜಿಲ್ಲಾ ಯೋಜನಾ ವಿವರಗಳನ್ನು ಆಯವ್ಯಯಕ್ಕೂ ಮೊದಲು ಮುಖ್ಯಮಂತ್ರಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ನೋಡಬಹುದಾಗಿದೆ. ಆದರೆ ನಗರ ಪ್ರದೇಶದಲ್ಲಿ ಜನರ ಪಾಲ್ಗೊಳ್ಳುವಿಕೆ ಕಾಣುತ್ತಿಲ್ಲ. ಆದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಡಿಸೆಂಬರ್ 6 ರೊಳಗೆ 100 ಮತಗಳಿಗೆ ಇಬ್ಬರನ್ನು ಆಯ್ಕೆ ಮಾಡಿ ನೆಯ್ಬರ್ ವುಡ್ ಗ್ರೂಪ್ ರಚಿಸಿ ನಂತರ ವಾರ್ಡ್ ಸಭೆಗಳನ್ನು ರಚಿಸಿ ನಗರ ಪ್ರದೇಶದ ಯೋಜನೆಗಳನ್ನು ರೂಪಿಸಿ ಎಂದರು.
ಗ್ರಾಮ ಹಾಗೂ ವಾರ್ಡ್ ಸಭೆಗಳಿಂದ ಜನರ ಅಭಿಪ್ರಾಯ ಪಡೆದು, ತಾಲೂಕು ಮಟ್ಟದ ಯೋಜನೆ ರೂಪಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ವರದಿಯನ್ನು ನೀಡಬೇಕು. ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ನಡೆದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಜನರ ಕಷ್ಟಗಳು ಪರಿಹಾರವಾಗುತ್ತದೆ ಎಂದರು.
ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಮಾತನಾಡಿ, ಜಿಲ್ಲೆಯ ಪ್ರಗತಿಪರ ಯೋಜನೆಗಳನ್ನು ರೂಪಿಸುವ ಸಲುವಾಗಿ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಯೋಜನೆ ರೂಪಿಸುವುದು ಬಾಕಿ ಇದ್ದು, ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಜಿಲ್ಲೆಗಳ ಯೋಜನೆಯ ವಿವರಗಳನ್ನು ವಿವರಿಸಿದರು.
ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಅಧಿಕಾರಿಗಳು ಇದ್ದರು.